You are currently viewing ಪಕ್ಷಾತೀತವಾಗಿ ಎಲ್ಲರೂ ಈ ಪುಸ್ತಕ ಓದಲೇಬೇಕು! – ಬಿಜೆಪಿ 25+1 ಬಗ್ಗೆ ಓದುಗರೊಬ್ಬರ ಅಭಿಪ್ರಾಯ

ಪಕ್ಷಾತೀತವಾಗಿ ಎಲ್ಲರೂ ಈ ಪುಸ್ತಕ ಓದಲೇಬೇಕು! – ಬಿಜೆಪಿ 25+1 ಬಗ್ಗೆ ಓದುಗರೊಬ್ಬರ ಅಭಿಪ್ರಾಯ

ಬಿಜೆಪಿ 25+1 , ಈ ಪುಸ್ತಕ ಕೆಲವು ದಿನಗಳ ಹಿಂದೆ ನನ್ನ ಕೈ ಸೇರಿತು. ಕಾರಣಾಂತರಗಳಿಂದ ಬೇಗನೆ ಮುಗಿಸೋದಕ್ಕೆ ಆಗಿರಲಿಲ್ಲ. ರಾಜಕೀಯ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನನಗೆ ಈ ಪುಸ್ತಕವನ್ನು ನೋಡಿದ ಕೂಡಲೇ ಕೊಂಡುಕೊಳ್ಳುವ ಆಸೆ ಆಯ್ತು. ಆದಷ್ಟು ಬೇಗ ಓದಬೇಕೆನ್ನುವ ಉತ್ಸಾಹವೂ ಇತ್ತು. ಹಾಗೆಯೇ ಓದಿ ಮುಗಿಸಿದೆ ಕೂಡ. ಬಿಜೆಪಿ ಅಂತ ಹೆಸರಿರುವ ಮಾತ್ರಕ್ಕೆ ನಾನು ಈ ಪುಸ್ತಕವನ್ನು ಖಂಡಿತವಾಗಿಯೂ ತೆಗೆದುಕೊಳ್ಳಲಿಲ್ಲ! ಏಕೆಂದರೆ ಒಬ್ಬ ಓದುಗನಾಗಿ ಯಾವುದೇ ಒಂದು ಪಕ್ಷ ಹಾಗೂ ಸಿದ್ಧಾಂತಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶ ನನ್ನದ್ದಾಗಿತ್ತು. ಈ ಪುಸ್ತಕವನ್ನು ಕೊಳ್ಳಲು ಎರಡು ಕಾರಣ:

1. ಹೇಗೆ ರಾಜಕೀಯ ಘಟನೆಗಳು ಹಾಗೂ ತೀರ್ಮಾನಗಳು  ನಮ್ಮ ಊಹೆಗೂ ಮೀರಿ , ಕ್ಷಣದಲ್ಲಿ ಬದಲಾಗಿ ಹೋಗ್ತದೆ, ರಾಜಕೀಯ ಪಕ್ಷಗಳ ನಾಲ್ಕು ಗೋಡೆಯ ಮಧ್ಯೆ ಏನೆಲ್ಲಾ ಬೆಳವಣಿಗೆಗಳು ಆಗ್ತದೆ ಎಂಬುದನ್ನು ತಿಳಿದುಕೊಳ್ಳಲು

2. ಈ ಪುಸ್ತಕವನ್ನು ಬರೆದವರು ಒಂದು ಜನಪ್ರಿಯ ಕನ್ನಡ ದಿನಪತ್ರಿಕೆಯ ರಾಜಕೀಯ ವಿಶ್ಲೇಷಕರು. ಏಕೆಂದರೆ ರಾಜಕೀಯ ಪಡಸಾಲೆಯಲ್ಲಿ ನಡೆಯುವ ಘಟನಾವಳಿಗಳನ್ನು ಅಚ್ಚುಕಟ್ಟಾಗಿ ವಿವರಿಸುವುದಕ್ಕೆ ಆಗೋದು ಅವರಿಂದ ಮಾತ್ರ.

ಲೇಖಕರು 2018ರ ವಿಧಾನಸಭಾ ಹಾಗೂ 2019ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯಲ್ಲಿ ನಡೆದಂತಹ ಅಷ್ಟೂ ಘಟನಾವಳಿಗಳನ್ನು ಸ್ಪಷ್ಟವಾಗಿ ಈ ಪುಸ್ತಕದಲ್ಲಿ ಬರೆದಿರುತ್ತಾರೆ. ಹೆಚ್ಚು ಆಶ್ಚರ್ಯವಾದದ್ದು ಘಟನೆಗಳ ದಿನಾಂಕಗಳನ್ನು ಹೆಚ್ಚು ನಿಖರವಾಗಿ ನಮೂದಿಸಿರುವುದು.

ಕಾರ್ಯಕರ್ತರು ಹಾಗೂ ರಾಜಕೀಯ ವಿಷಯದಲ್ಲಿ ಹೆಚ್ಚು ಆಸಕ್ತಿ ಉಳ್ಳವರು ಪಕ್ಷಾತೀತವಾಗಿ ಈ ಪುಸ್ತಕವನ್ನು ಓದಬೇಕೆಂದು ವಿನಂತಿಸಿಕೊಳ್ತೇನೆ. ಏಕೆಂದರೆ ಕಾರ್ಯಕರ್ತರಿಗೆ ಪಕ್ಷಗಳ ಚೌಕಟ್ಟಿನಲ್ಲಿ ಅದರಲ್ಲೂ ನಾಯಕರುಗಳ ಮಧ್ಯೆ ನಡೆಯುವ ಒಳ ಒಪ್ಪಂದಗಳು,  ಘರ್ಷಣೆಗಳ  ಬಗ್ಗೆ ಹೆಚ್ಚು ಮಾಹಿತಿಗಳು ಇರುವುದಿಲ್ಲ. ಹಾಗಾಗಿ ಇಂತಹ ಪುಸ್ತಕಗಳನ್ನು ಓದಿದ್ದಲ್ಲಿ ಹೆಚ್ಚು ನೈಜ ಸಂಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗ್ತದೆ. Ramesha Doddapura ಸರ್ ರವರಿಗೆ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಪುಸ್ತಕಗಳು ಹೊರಬರಲೆಂದು ಕೋರುತ್ತೇನೆ.

– ಶ್ರೀನಿಧಿ ಅಚ್ಯುತ
(ಮೂಲತಃ ಕೋಲಾರದವರಾಗಿರುವ ಶ್ರೀನಿಧಿ ಮೋದಿ ಅಭಿಮಾನಿ. ಧೋನಿಯ ಫ್ಯಾನ್. ಶ್ರೀ ಗಾಯತ್ರಿ ಸಪ್ಲೈಯರ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಫೇಸ್ಬುಕ್ ಖಾತೆ: facebook.com/srinidhi.achyutha)