You are currently viewing ‘ಗಣಿತಜ್ಞರ ರಸಪ್ರಸಂಗಗಳು’ ಲೇಖಕರ ನಾಲ್ಕು ಮಾತು…

‘ಗಣಿತಜ್ಞರ ರಸಪ್ರಸಂಗಗಳು’ ಲೇಖಕರ ನಾಲ್ಕು ಮಾತು…

ಗಣಿತ ಅಂದರೇನೇ ನಮ್ಮಲ್ಲಿ ಕೆಲವರಿಗೆ ತಲೆಸುತ್ತು ಬಂದು ರಕ್ತದೊತ್ತಡ ಏರಿ ಹೃದಯಸ್ತಂಭನ ಆಗುವ ಸಂಭವವುಂಟು! ಇನ್ನು ಗಣಿತಜ್ಞರೆಂದರೆ? ಅವರು ಯಾವುದೋ ಲೋಕದಿಂದ ಇಳಿದು ಬಂದ ಅನ್ಯಗ್ರಹ ಜೀವಿಗಳು ಅಥವಾ ಇಲ್ಲಿದ್ದರೂ ಯಾವುದೋ ಲೋಕದಲ್ಲಿ ವಿಹರಿಸುತ್ತಿರುವಂತೆ ಕಾಣುವ ಮಾನಸವಿಲಾಸಿಗಳು ಎಂದು ನಾವು ತಿಳಿದುಕೊಳ್ಳುತ್ತೇವೆ. ಇದಕ್ಕೆ ಕಾರಣವೂ ಉಂಟೆನ್ನಿ. ಮೊದಲನೆಯದಾಗಿ, ನಮ್ಮ ಗಣಿತಜ್ಞರು ಬರೆಯುವ ಕಗ್ಗದಲ್ಲಿ 99.9% ನಮ್ಮಂತಹ ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ. ಭೂತ ಬಂಗಲೆಯಲ್ಲಿ ಜೇಡಗಳು ಬಲೆ ನೇಯ್ದ ಹಾಗೆ ಅವರ ಬರವಣಿಗೆಯ ತುದಿಯಿಂದ ಬುಡದವರೆಗೂ ಸಮೀಕರಣಗಳ ಮೆರವಣಿಗೆ ಇರುತ್ತದೆ. ಅಂಥಾದ್ದನ್ನು ಓದಿ ಇಲ್ಲದ ತಲೆನೋವು ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಬೇರೆಯವರು ಗಣಿತಜ್ಞರ ಹತ್ತಿರವೇ ಸುಳಿಯುವುದಿಲ್ಲ. ಎರಡನೆಯದಾಗಿ, ಗಣಿತಜ್ಞರ ಅನ್ಯಮನಸ್ಕತೆ ಜಗದ್ವಿಖ್ಯಾತ. ಕೆಲವು ಸಲ ಅವರು ತಮ್ಮ ಹೆಸರನ್ನೇ ಮರೆತುಬಿಡುವಷ್ಟು ದೊಡ್ಡ ಋಷಿಗಳು! ಗಣಿತ ಲೋಕದಲ್ಲಿ ಸ್ವಚ್ಛಂದವಾಗಿ ಹಾರಾಡಿದರೂ ಹೊರ ಜಗತ್ತಿನ ವ್ಯವಹಾರಗಳಲ್ಲಿ ಅವರ ಸಾಮಥ್ರ್ಯ ಸೊನ್ನೆ ಅನ್ನುವುದು ನಮಗೆಲ್ಲ ಗೊತ್ತಿದೆ. ಅನ್ಯಮನಸ್ಕತೆ ಎನ್ನುವುದೂ ಒಂದು ಮಾನಸಿಕ ಕಾಯಿಲೆ ಎಂದುಕೊಳ್ಳುವ ಸಮಾಜದಲ್ಲಿ ಗಣಿತಜ್ಞರಿಗೆ ಯಾವ ಬಗೆಯ ಮರ್ಯಾದೆ ಸಿಗಬಹುದು ಎನ್ನುವುದನ್ನು ಯೋಚಿಸುವುದು ಕಷ್ಟವಲ್ಲ. ಇನ್ನು ಮೂರನೆಯದಾಗಿ, ಅವರು ಇದ್ದರೆಷ್ಟು ಬಿದ್ದರೆಷ್ಟು ಎಂದು ನಾವೇ ಬೆಳೆಸಿಕೊಂಡಿರುವ ದಿವ್ಯ ಅನಾಸಕ್ತಿ. ಬೇಕಾದರೆ ಸಿನೆಮಾಗಳಲ್ಲೇ ನೋಡಿ; ವಿಜ್ಞಾನಿಗಳನ್ನು ನೋಡಿದಷ್ಟು ಸಲ ಗಣಿತಜ್ಞರನ್ನು ನೋಡಿದ್ದೀರಾ? ಅವರು ಏನು ಮಾಡುತ್ತಾರೆ ಎನ್ನುವುದು ನಿಮಗೆಂದಾದರೂ ಗೊತ್ತಾಗಿದೆಯೆ? ಯಾವ ಪುರುಷಾರ್ಥಕ್ಕಾಗಿ ಗಣಿತ ಬರೆಯುತ್ತಾರೆ ಎನ್ನುವುದು ಕೆಲವು ಸಲ ಸ್ವತಃ ಅವರಿಗೇ ಗೊತ್ತಿರುವುದಿಲ್ಲ! ಹೀಗಿರುವಾಗ ಅವರ ಬದುಕಲ್ಲಿ ಆಸಕ್ತಿ ತೋರಿಸಿ ನಮಗೆ ಆಗಬೇಕಾದ್ದೇನು ಎಂದು ನಾವು ಅವರನ್ನು ಕಣ್ಣೆತ್ತಿಯೂ ನೋಡುವುದಿಲ್ಲ!

ಈ ಎಲ್ಲ ದುರಂತಗಳ ಭಯವಿದ್ದೂ ನಾನು ಗಣಿತಜ್ಞರ ಬದುಕಿನ ರಸಪ್ರಸಂಗಗಳನ್ನು ಬರೆಯಲು ಹೊರಟಿರುವುದು, ಹಾಲೊಲ್ಲದ ಮಗುವಿನ ಬಾಯಿಗೆ ಕಜ್ಜಾಯ ತುರುಕಿದಂತೆ ಆಗಬಹುದೆ? ಎನ್ನುವ ಅಳುಕಂತೂ ಇದೆ. ಆದರೆ, ಕೆಲವರಾದರೂ ಇಲ್ಲಿನ ಕತೆಗಳನ್ನು ಓದಿ ನಕ್ಕು ಯೋಚಿಸಿ ಆಸಕ್ತಿ ವಹಿಸಿ ಪ್ರೀತಿ ಬೆಳೆಸಿಕೊಂಡು ಗಣಿತ ಲೋಕಕ್ಕೆ ಹತ್ತಿರ ಬಂದಾರು ಎನ್ನುವ ಸಣ್ಣ ಭರವಸೆಯೂ ಇದೆ. ಇಲ್ಲಿರುವ ಕತೆಗಳನ್ನು ನಾನೇ ಶಾಲೆಯಲ್ಲಿದ್ದಾಗ ಓದಿದ್ದರೆ, ಗಣಿತವನ್ನು ಇನ್ನಷ್ಟು ಹೆಚ್ಚಿನ ಪ್ರೀತಿಯಿಂದ ಕಲಿಯುತ್ತಿದ್ದೆ ಎನ್ನುವುದು ಮಾತ್ರ ಬರೆಯುವ ಪ್ರತಿ ಕ್ಷಣದಲ್ಲೂ ನನಗೆ ಅನ್ನಿಸಿದೆ. ಅದು ಭಂಡ ಬಡಾಯಿಯೋ ಆತ್ಮವಿಶ್ವಾಸದ ವಿನಯವೋ ಓದುಗರೇ ಹೇಳಬೇಕು!

ಈ ಪುಸ್ತಕ ಬರೆಯಲು ನನಗೆ ಪ್ರೇರಣೆ ಸಿಕ್ಕಿದ್ದು ಜೆ. ಆರ್. ಲಕ್ಷ್ಮಣರಾಯರ “ವಿಜ್ಞಾನಿಗಳೊಡನೆ ರಸನಿಮಿಷಗಳು” ಕೃತಿಯಿಂದ. ಒಂದು ಸಂಸ್ಕøತಿಯನ್ನು ಅರ್ಥ ಮಾಡಿಕೊಳ್ಳಲು ಅದರ ಹಾಸ್ಯ ಕತೆಗಳನ್ನು ಓದಬೇಕು ಎನ್ನುವ ಹಾಗೆಯೇ ಒಬ್ಬ ವಿಜ್ಞಾನಿಯ ಮನಸ್ಸನ್ನು ಹೆಚ್ಚು ಚೆನ್ನಾಗಿ ಅರಿಯಲು ಇಂತಹ ರಸನಿಮಿಷಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನನಗೆ ಯಾವತ್ತೂ ಅನ್ನಿಸಿದೆ. ಗಣಿತಜ್ಞರ ಬದುಕಲ್ಲೂ ಈ ಬಗೆಯ ರಸನಿಮಿಷಗಳಿಗೇನೂ ಕೊರತೆಯಿಲ್ಲ. ಆದರೆ, ಶಂಖದ ಹುಳುಗಳಂತೆ ತುಂಬಾ ನಾಚಿಕೆಯಿಂದ ಬದುಕುವ ಈ ಜೀವಿಗಳ ವಿಕ್ಷಿಪ್ತತೆಯಿಂದಾಗಿ ಹೆಚ್ಚಿನ ಸನ್ನಿವೇಶಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ, ಅಷ್ಟೆ.

ಈ ಪುಸ್ತಕ ಬರೆಯುವಾಗ ನಾನೇ ಹಾಕಿಕೊಂಡ ಕೆಲವೊಂದು ಮಿತಿ, ಕಟ್ಟುಪಾಡುಗಳ ಬಗ್ಗೆ ಹೇಳಿಬಿಡುತ್ತೇನೆ. ಮೊದಲನೆಯದಾಗಿ, ಲಕ್ಷ್ಮಣರಾಯರ ಕೃತಿಯಲ್ಲೇ ಅನೇಕ ಗಣಿತಜ್ಞರ ಜೀವನ ಪ್ರಸಂಗಗಳೂ ಬಂದಿವೆಯಾದ್ದರಿಂದ, ಅಂಥವನ್ನು ನನ್ನ ಕೃತಿಯಲ್ಲಿ ಉದ್ದೇಶಪೂರ್ವಕವಾಗಿ ಕೈ ಬಿಟ್ಟಿದ್ದೇನೆ. ಗಣಿತಜ್ಞನ ಮಾನವೀಯ ಮುಖವನ್ನು ತೋರಿಸುತ್ತದೆ ಎಂದೆನ್ನಿಸುವ ಕತೆಗಳಿಗೆ ಮೊದಲ ಪ್ರಾಧಾನ್ಯತೆ; ಗಣಿತಾಂಶಗಳಿಗೆ ಹಿಂದಿನ ಬೆಂಚು ದಯಪಾಲಿಸಲಾಗಿದೆ. ಜನಸಾಮಾನ್ಯರೂ ಓದಿ ಖುಷಿಪಡಬೇಕಾದ ಪುಸ್ತಕ ಆಗಬೇಕು ಎನ್ನುವ ಬಯಕೆಯಿಂದ ರೂಪಿಸಿದ್ದರಿಂದ ಇಂತಹ ಕತ್ತರಿ ಪ್ರಯೋಗಗಳು ಅನಿವಾರ್ಯ. ಇನ್ನು ಕೇವಲ ಹೇಳಿಕೆಗಳಾಗಿ ನಿಲ್ಲುವ, ಅಥವಾ ಗಣಿತ ಬಲ್ಲವರಿಗೆ ಮಾತ್ರ ಅರ್ಥವಾಗುವ ಹಾಸ್ಯಕ್ಕೆ, ಅದೆಷ್ಟೇ ಚೆನ್ನಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಬಹಿಷ್ಕಾರ ಹಾಕಬೇಕಾಗಿದೆ. ಇದರಿಂದ ಎಷ್ಟೊಂದು ಒಳ್ಳೆಯ ಕತೆಗಳನ್ನು ಹೊರಗಿಡಬೇಕಾಯಿತಲ್ಲ ಎನ್ನುವ ದುಃಖ ನನಗಿದೆ; ಅದು ನನಗೇ ಇರಲಿ! ಹಾಗೆಯೇ, ಇದು ಕೇವಲ “ರಸಪ್ರಸಂಗ”ಗಳನ್ನು ಮಾತ್ರ ಬಿಂಬಿಸುವ ಪುಸ್ತಕವಾದ್ದರಿಂದ, ಗಣಿತಜ್ಞರಿಗೆ ಅವರ ಯೋಗ್ಯತೆಯ ಆಧಾರದ ಮೇಲೆ ರ್ಯಾಂಕ್ ಕೊಡುವ ಕೆಲಸ ಮಾಡಿಲ್ಲ. ಗರ್ಡ್‍ಲ್‍ನಂತಹ “ಸಭ್ಯ” ಗಣಿತಜ್ಞನಿಗೆ ಇಲ್ಲಿ ಹೆಚ್ಚು ಪುಟಗಳು ಸಿಕ್ಕಿಲ್ಲ. ಹಾಗೆಂದು ಅವನ ಗಣಿತ ಕನಿಷ್ಠ ಎನ್ನುವ ಮೌಲ್ಯಾಂಕನ ಮಾಡಲು ಹೋಗಬಾರದು!

ಇವನ್ನು “ರಸಪ್ರಸಂಗಗಳು” ಎಂದು ಕರೆದರೂ ಎಲ್ಲವೂ ನಡೆದ ಘಟನೆಗಳೇ ಎನ್ನಬರುವುದಿಲ್ಲ. ಕೆಲವನ್ನು ಆಯಾ ವ್ಯಕ್ತಿಗಳ ಯಾವುದೋ ಸ್ವಭಾವಕ್ಕೆ ತಕ್ಕಂತೆ ತಿಳಿದವರು, ಗೆಳೆಯರು, ಆರಾಧಕರು ಹುಟ್ಟಿಸಿ ಬೆಳೆಸಿರಬಹುದು. ಇನ್ನು ಕೆಲವು ಕತೆಗಳಲ್ಲಿ ಉತ್ಪ್ರೇಕ್ಷೆಯ ಪಸೆ ಇರಬಹುದು. ಕೆಲವಂತೂ ಕೇವಲ ಉದಂತಕತೆಗಳಾಗಿರಬಹುದು. ನನ್ನ ತಿಳುವಳಿಕೆಗೆ ತಕ್ಕಷ್ಟು ಸಂಶೋಧನೆ ಮಾಡಿ, ಕಾಳನ್ನು ಮಾತ್ರ ಉಳಿಸಿಕೊಂಡು ಜೊಳ್ಳನ್ನು ತೂರುವ ಪ್ರಯತ್ನ ಮಾಡಿದ್ದೇನೆ. “ಪ್ರತಿ ದಿನ ಹಿಂದಿನದಕ್ಕಿಂತ ಹದಿನೈದು ನಿಮಿಷ ಹೆಚ್ಚು ಮಲಗಿದ. ಕೊನೆಗೊಂದು ದಿನ 24 ಗಂಟೆ ನಿದ್ದೆ ಮಾಡಬೇಕಾಗಿ ಬಂದು ತೀರಿಕೊಂಡ” ಎಂಬಂತಹ ಕೆಲವು ಕತೆಗಳಂತೂ ಐದಾರು ಜನರ ಹೆಸರಿನಲ್ಲಿ ಪುನರಾವರ್ತನೆಯಾಗಿವೆ! ಹೀಗಾಗಿ, ಆ ಕತೆಗಳ ನಿಜವಾದ ನಾಯಕ ಯಾರು ಎನ್ನುವುದನ್ನು ಗುರುತಿಸುವುದು ಕಷ್ಟ. ಅವುಗಳನ್ನು ಈ ಹೊತ್ತಗೆಯ ಚೌಕಟ್ಟಿನಿಂದ ಹೊರಗಿಟ್ಟಿದ್ದೇನೆ. ಇದುವರೆಗೆ ಕನ್ನಡದಲ್ಲಿ ಬರದ ಅಪರೂಪದ ಕತೆಗಳನ್ನು, ದೀರ್ಘವಾದರೂ ಸ್ವಲ್ಪ ಗಣಿತಾಂಶ ಮೆತ್ತಿಕೊಂಡಿದ್ದರೂ, ಉಳಿಸಿಕೊಂಡಿದ್ದೇನೆ. ಮಾನವ ಗಣಕಗಳಂತೆ ಸೆಕೆಂಡುಗಳಲ್ಲೇ ದೊಡ್ಡ ದೊಡ್ಡ ಸಂಖ್ಯೆಗಳನ್ನು ಗುಣಿಸಿ, ಭಾಗಿಸಿ ಉತ್ತರ ಹೇಳುತ್ತಿದ್ದ ಕೆಲ ವಿಚಿತ್ರ ವ್ಯಕ್ತಿಗಳ ಕತೆಗಳು ಇಲ್ಲಿ ಬಂದಿವೆ. ಎರಡು ಸಣ್ಣ ಸಂಖ್ಯೆಗಳನ್ನು ಕೂಡುವುದಕ್ಕೂ ಪರದಾಡುತ್ತಿದ್ದ ಮೇರು ಗಣಿತಜ್ಞರ ಕತೆಗಳೂ ಇವೆ. ನನ್ನ ಬೇರೆ ಪುಸ್ತಕಗಳಲ್ಲಿ ಈಗಾಗಲೇ ಬಂದಿರುವ ಕತೆಗಳು, ಸನ್ನಿವೇಶಗಳು ಇಲ್ಲಿ ಸೇರಿಲ್ಲ. ಭಾಸ್ಕರಾಚಾರ್ಯರ ಮಗಳ (ಲೀಲಾವತೀ) ವೈಧವ್ಯದಂತಹ ಕತೆಗಳು ಇಲ್ಲಿ ಬಂದಿಲ್ಲ. ಅದು ರಸಪ್ರಸಂಗ ಅಲ್ಲ ಎನ್ನುವುದು ಒಂದು ಕಾರಣ; ಅದು ಕೇವಲ ಕಟ್ಟುಕತೆಯಾಗಿರಬಹುದು ಎನ್ನುವುದಕ್ಕೆ ಹೆಚ್ಚು ಪುರಾವೆಗಳಿರುವುದು ಎರಡನೆ ಕಾರಣ.

ಇಲ್ಲಿನ ರಸಪ್ರಸಂಗಗಳು ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದರೆ, ಗಣಿತಜ್ಞರನ್ನು ನಿಮ್ಮ ಹತ್ತಿರಕ್ಕೆ ಸೆಳೆದರೆ ನನ್ನ ಪ್ರಯತ್ನ ಸಾರ್ಥಕ ಎಂದು ಭಾವಿಸುವೆ.

– ರೋಹಿತ್ ಚಕ್ರತೀರ್ಥ

(ಗಣಿತಜ್ಞರ ರಸಪ್ರಸಂಗಗಳು ಕೃತಿಯಲ್ಲಿ ಒಟ್ಟು 87 ‘ಪ್ರಸಂಗ’ಗಳಿವೆ. ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಿವೆ. ಚಿತ್ರಗಳನ್ನು ಕಾರ್ಟೂನಿಸ್ಟ್ ಶೈಲೇಶ್ ಕುಮಾರ್ ಉಜಿರೆ ಬರೆದಿದ್ದಾರೆ. ಕೃತಿಯಲ್ಲಿ ಪ್ರಸ್ತಾಪವಾದ ಅಷ್ಟೂ ಪ್ರಮುಖ ಗಣಿತಜ್ಞರ ಮಾಹಿತಿಯನ್ನು ಕೃತಿಯ ಕೊನೆಯಲ್ಲಿ ಕೊಡಲಾಗಿದೆ. ಹದಿಹರೆಯದ ಮಕ್ಕಳಿಗೆ ನಕ್ಕುನಲಿಯಲು, ಜೊತೆಗೆ ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಇದೊಂದು ಅತ್ಯುತ್ತಮ ಕೊಡುಗೆ)