You are currently viewing “ಇವರು ಬರೆದದ್ದು ನನ್ನದೇ ಕಥೆ!!” – ಸೆಲೆಸ್ಟ್ ಅವರ ಮೊದಲ ಓದಿನ ವಿಮರ್ಶೆ

“ಇವರು ಬರೆದದ್ದು ನನ್ನದೇ ಕಥೆ!!” – ಸೆಲೆಸ್ಟ್ ಅವರ ಮೊದಲ ಓದಿನ ವಿಮರ್ಶೆ

ರೋಹಿತ ಚಕ್ರತೀರ್ಥರ “ಮನ ಮೆಚ್ಚಿದ ಹುಡುಗಿ” ಪುಸ್ತಕವನ್ನು ಓದಿ ನನ್ನ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ. ನಾನೇನೂ ವಿಮರ್ಶಕಳಲ್ಲ. ಪತ್ರಿಕೆಗಳಲ್ಲಿ ಲೇಖನವೂ ಬರೆದಿಲ್ಲ. ಹಾಗಾಗಿ ನನ್ನ ಬರಹದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಮನ್ನಿಸುವಿರೆಂದು ನಂಬಿದ್ದೇನೆ.

ನಾನು ಇದನ್ನು ಬರೆಯುತ್ತಿರಲು ಮುಖ್ಯ ಕಾರಣವೆಂದರೆ ಈ ಕೃತಿಯನ್ನು ಓದಿ ನನಗಾದ ಸಂತೋಷ. ಚಿಕ್ಕಂದಿನಿಂದಲೂ ನನಗೆ ಪುಸ್ತಕ ಓದುವ ಹವ್ಯಾಸ. ತ್ರಿವೇಣಿಯವರಿಂದ ಹಿಡಿದು ಯಂಡಮೂರಿ ವರೆಗೆ ಹಲವು ಪುಸ್ತಕಗಳನ್ನು ಓದಿದ್ದೇನೆ. ಹಾಗಂತ ನನ್ನದೇನೂ ತುಂಬ ಶಿಸ್ತಿನ ಓದಲ್ಲ. ಇಂಥಾದ್ದೇ ಓದಬೇಕೆಂದು ನಿರ್ಧರಿಸಿಕೊಂಡು ಓದಿದ್ದಲ್ಲ. ಕೈಗೆ ಸಿಕ್ಕಿದ್ದೆಲ್ಲ ಓದಿಕೊಂಡು ಬೆಳೆದದ್ದು ನಾವು. ಹೀಗೆ ನಿರಂತರವಾಗಿ ಓದಿದ್ದರಿಂದ ಸಾಹಿತ್ಯದ ರುಚಿ ಅಷ್ಟಿಷ್ಟು ಹತ್ತಿತು. ವೃತ್ತಿಯಲ್ಲಿ ತೊಡಗಿಕೊಂಡ ಮೇಲೆ, ಮದುವೆಯಾಗಿ ಮಕ್ಕಳ ಲಾಲನೆ ಪಾಲನೆ ಮಾಡತೊಡಗಿದ ಮೇಲೆ ಓದಲು ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಇರಲಿ.

ಇತ್ತೀಚೆಗೆ ಅಯೋಧ್ಯಾ ಪ್ರಕಾಶನದ “ಮನ ಮೆಚ್ಚಿದ ಹುಡುಗಿ” ಕೃತಿ ಬಿಡುಗಡೆಯಾದ ಬಗ್ಗೆ ತಿಳಿಯಿತು. ಬೊಳುವಾರು ಮಹಮ್ಮದ್ ಕುಂಞÂಯವರು ಮುನ್ನುಡಿ ಬರೆದದ್ದನ್ನು ಫೇಸ್‍ಬುಕ್ಕಿನಲ್ಲಿ ಓದಿದೆ. ಯಾಕೋ ಈ ಪುಸ್ತಕ ಸ್ವಲ್ಪ ವಿಶಿಷ್ಟವಾಗಿದೆ ಎನ್ನಿಸಿತು. ತರಿಸಿದೆ. ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಂಡು ಈ ಪುಸ್ತಕವನ್ನು ನಾಲ್ಕು ದಿನಗಳಲ್ಲಿ ಓದಿ ಮುಗಿಸಲು ಸಾಧ್ಯವಾಯಿತು. ಮುನ್ನುಡಿಯಲ್ಲಿ ಹೇಳಿರುವಂತೆ ಇಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಕತೆಗಳಿವೆ. ಒಂದು ಗಣಿತದ ಕತೆ ಕೂಡ ಇದೆ. ಆ ಕತೆಗೆ ಒಂದು ಗಣಿತದ ಚಿತ್ರ ಕೂಡ ಕೊಟ್ಟಿದ್ದಾರೆ! ಗಣಿತಕ್ಕೂ ನನಗೂ ಅತ್ತೆ ಸೊಸೆ ರೀತಿಯ ಸಂಬಂಧ! ಶಾಲೆಯಲ್ಲಿ ಇದ್ದಷ್ಟೂ ಸಮಯ ನನ್ನನ್ನು ಭಯಪಡಿಸುತ್ತಿದ್ದ ಭಯೋತ್ಪಾದಕ ಲೆಕ್ಕ ಒಂದೇ! ಹಾಗಾಗಿ ಪುಸ್ತಕದಲ್ಲಿ ಅದೊಂದು ಕತೆಯನ್ನು ಬಿಟ್ಟು ಮಿಕ್ಕಿದ್ದೆಲ್ಲ ಓದುವ ಎಂದುಕೊಂಡು ಓದಿದರೂ, ಎಲ್ಲವನ್ನೂ ಓದಿ ಮುಗಿಸಿದ ಮೇಲೆ ಅದೊಂದನ್ನು ಬಿಡುವುದು ಯಾಕೆ ಎಂದು ಅದನ್ನೂ ಓದಲು ಶುರುಮಾಡಿದೆ. ಓದುತ್ತ ಹೋದಂತೆ ಇದು ಇವರು ನನ್ನ ಕತೆಯನ್ನೇ ಬರೆದಿದ್ದಾರೆ ಅನ್ನಿಸತೊಡಗಿತು! ಆ ಕತೆಯನ್ನು ನಾನು ಓದದೇ ಬಿಟ್ಟಿದ್ದರೆ ನಿಜಕ್ಕೂ ಒಂದು ಅದ್ಭುತ ಅನುಭವವನ್ನು ಕಳೆದುಕೊಳ್ಳುತ್ತಿದ್ದೆ ಎನ್ನಬಹುದು! ಅದು ಅಷ್ಟೊಂದು ಚೆನ್ನಾಗಿದೆ. ಅದರಲ್ಲಿ ನನಗೆ ಅರ್ಥವಾಗದ ಗಣಿತವೇನೂ ಇಲ್ಲ. ಕತೆಯನ್ನು ಬರೆದಿರುವ ರೀತಿ ಮಾತ್ರ ಮನಮೋಹಕವಾಗಿದೆ.

ಉಳಿದಂತೆ ಈ ಪುಸ್ತಕದಲ್ಲಿ ನಾನು ಹೆಸರೇ ಕೇಳದಿರುವ ಅನೇಕ ಕತೆಗಾರರಿದ್ದಾರೆ. ಕಾಮಿತಾರ್ಥ ಎಂಬ ಒಂದು ಕತೆ ತುಂಬ ಇಷ್ಟವಾಯ್ತು. ಬೆಟ್ಟು ಕತೆಯನ್ನು ಓದ್ತಾ ಹೋಗ್ತಿದ್ದ ಹಾಗೆ ಆ ಜಾಗದಲ್ಲಿ ನಾನೇ ಕೂತಿದ್ದೀನೋ ಏನೋ ಅನ್ನಿಸತೊಡಗಿತ್ತು. ನನ್ನದೇ ಬೆರಳನ್ನ ಈಗ ಕಟ್ ಮಾಡಿಬಿಡ್ತಾರೆ ಎಂಬಷ್ಟು ಗಾಬರಿಯಾಗುತ್ತ ಆ ಕತೆಯನ್ನು ಓದಿದೆ.

ನನಗೆ ತುಂಬ ಇಷ್ಟವಾದ ಕತೆಗಳು ಟಾಲ್‍ಸ್ಟಾಯ್ ಬರೆದ ಹಬ್ಬದ ಅತಿಥಿ, ದೇವರ ನ್ಯಾಯ ಮತ್ತು ಓ ಹೆನ್ರಿ ಬರೆದ ಉಡುಗೊರೆ ಕತೆಗಳು. ದೇವರು ಎಲ್ಲೆಲ್ಲೂ ಇದ್ದಾನೆ ಎಂಬುದನ್ನು ಎಲ್ಲ ಧರ್ಮಗಳೂ ಹೇಳುತ್ತವೆ. ಅದನ್ನು ಕತೆಯ ಮೂಲಕ ಹೇಳಿದ ಬಗೆ ಬಹಳ ಇಷ್ಟವಾಯಿತು. ಪಬ್ಲಿಷರ್ ಹೆಸರು ಅಯೋಧ್ಯ ಅಂತ ಇದ್ದಾಗ ಈ ಪುಸ್ತಕದಲ್ಲೂ ಏನಾದರೂ ಹಿಂದೂ ಪ್ರತಿಪಾದನೆ ಇರುತ್ತೇನೋ ಎಂದುಕೊಂಡಿದ್ದೆ. ಆದರೆ ಕ್ರಿಸ್ಮಸ್‍ಗೆ ಸಂಬಂಧಿಸಿದ ಮೂರು ಕತೆಗಳನ್ನು ನೋಡಿ ನಿಜಕ್ಕೂ ಆಶ್ಚರ್ಯವೇ ಆಯಿತೆನ್ನಬೇಕು. ಆ ಕತೆಗಳನ್ನು ಓದಿದ ಮೇಲೆ ನನಗೆ ನನ್ನ ಧರ್ಮದ ಬಗ್ಗೆ, ವೃತ್ತಿಯ ಬಗ್ಗೆ ಅಭಿಮಾನ ಹೆಚ್ಚಿತು ಎಂದು ಅತ್ಯಂತ ಧೈರ್ಯದಿಂದ ಹೇಳಬಲ್ಲೆ. ಪುಸ್ತಕದ ಇತರ ಕತೆಗಳೂ ಬಹಳ ಚೆನ್ನಾಗಿವೆ. ಪ್ರತಿಯೊಬ್ಬರೂ ಓದಿ ಖುಷಿಪಡಬಹುದಾದ ಕೃತಿ ಇದು.

– ಸೆಲೆಸ್ಟ್ ರೊಜಾರಿಯೋ
(ಶ್ರೀಮತಿ ಸೆಲೆಸ್ಟ್ ಅವರು ಮೂಲತಃ ಸಕಲೇಶಪುರದವರು. ಇಬ್ಬರು ಮಕ್ಕಳ ಮುದ್ದಿನ ತಾಯಿ. ಮಂಗಳೂರಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.)