You are currently viewing ಮಹಿಷಪಂಥೀಯರಿಗೆ ಒಂದಷ್ಟು ಸಲಹೆಗಳು…. ‘ಓಪನ್ ಚಾಲೆಂಜ್’ನ ಒಂದು ಪುಟ..

ಮಹಿಷಪಂಥೀಯರಿಗೆ ಒಂದಷ್ಟು ಸಲಹೆಗಳು…. ‘ಓಪನ್ ಚಾಲೆಂಜ್’ನ ಒಂದು ಪುಟ..

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪ್ರಾರಂಭವಾದ ಮಹಿಷ ದಸರಾ ಕಾರ್ಯಕ್ರಮ ಈ ವರ್ಷವೂ ಸಾಂಗವಾಗಿ ನೆರವೇರಿ ಸಾಕಷ್ಟು ಪ್ರಚಾರವನ್ನೂ ಪಡೆದುಕೊಂಡಿತು. ಮಹಿಷ ದಸರಾ ಪ್ರಾರಂಭವಾದ ಬೆನ್ನಲ್ಲೇ JNU ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ ಕೆಲವು ಎಡಪಂಥೀಯ ವಿದ್ಯಾರ್ಥಿಗಳು ಮಹಿಷಾಸುರನ ಹುತಾತ್ಮ ದಿನಾಚರಣೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಚರಿಸಿ ದುರ್ಗಾ ಮಾತೆಯನ್ನು ವೇಶ್ಯೆ ಎಂದು ಕರೆಯುವ ಮೂಲಕ ದೇಶದಾದ್ಯಂತ ಗಲಭೆಯಾಗುವಂತಹಾ ಸ್ಥಿತಿ ನಿರ್ಮಾಣವಾಗಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದು. ಆದರೆ ಮಹಿಷ ದಸರಾ ಕಾರ್ಯಕ್ರಮದಲ್ಲಿ ನನ್ನ ಗಮನ ಸೆಳೆದ ವಿಚಾರವೇ ಬೇರೆ.ಈ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದವರಲ್ಲಿ ಒಬ್ಬರು ತಮ್ಮ ಮೇಲೆ ಲೆಕ್ಕವಿಲ್ಲದಷ್ಟು ದೂರುಗಳಿದ್ದರೂ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡವರು. ಇನ್ನೊಬ್ಬರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದೂ,ಕಾನೂನನ್ನು ಮೀರಿ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದವರು.ಮತ್ತೊಬ್ಬರು ಸ್ವತಃ ಸಿದ್ದರಾಮಯ್ಯನವರ ಪಕ್ಷದ ನಾಯಕರು. ಅದೇನೇ ಇರಲಿ,ನಿರ್ದಿಷ್ಟ ಪಕ್ಷದ ಅಥವಾ ವ್ಯಕ್ತಿಯ ಬೆಂಬಲಿಗರು ಎನ್ನುವ ಕಾರಣಕ್ಕೆ ಅವರನ್ನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ನಿರ್ಬಂಧಿಸಲು ಈಗೇನೂ ಇಂದಿರಾ ಫಿರೋಜ್ ರವರ ಸರ್ವಾಧಿಕಾರೀ ಸರ್ಕಾರವಿಲ್ಲ.ಆದ್ದರಿಂದ ಆ ವಿಚಾರ ಇಲ್ಲಿಗೇ ಬಿಟ್ಟುಬಿಡೋಣ.

 ಆದರೂ ಎಲ್ಲೋ ಒಂದು ಕಡೆ ಆ ಕಾರ್ಯಕ್ರಮವನ್ನು ಸಾರ್ವಜನಿಕರಾಗಲೀ,ಮೂಲ ನಿವಾಸಿಗಳಾಗಲೀ, ಮಹಿಳೆಯರು, ಬಡವರು, ಶೋಷಿತರಾಗಲೀ ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಿಲ್ಲವೇನೋ ಎನ್ನುವಂತೆ ತೋರುತ್ತಿದೆ. ಶ್ರದ್ಧೆಯಿಂದ ನಿರ್ವಹಿಸುವ ಯಾವುದೇ ಕೆಲಸಗಳೂ ವಿಫಲವಾಗಬಾರದೆನ್ನುವುದು ನಮ್ಮ ಆಶಯವೂ ಹೌದು.ಅದಕ್ಕಾಗಿಯೇ ಮುಂದೆ ಮಹಿಷ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದರೆ ಏನೇನು ಮಾಡಬೇಕು ಎನ್ನುವ ಬಗ್ಗೆ ಅವರುಗಳಿಗೆ ಒಂದಷ್ಟು ಸಲಹೆಗಳನ್ನು ನೀಡುವುದು ನಮ್ಮ ಧರ್ಮ.

ಮಹಿಷಾಸುರ ಒಬ್ಬ ನಿಜವಾದ ಇತಿಹಾಸಪುರುಷ ಎನ್ನುವ ವಾದವನ್ನು ಮುಂದಿಟ್ಟುಕೊಂಡೇ ತಾವುಗಳು ಮಹಿಷ ದಸರಾ ಕಾರ್ಯಕ್ರಮವನ್ನು ಪ್ರಾರಂಭಿಸಿದಿರಿ.ಆತ ಒಬ್ಬ ಬೌದ್ಧ ದೊರೆ ಎಂದೂ,ಆತ ಮೈಸೂರು ಪ್ರಾಂತ್ಯದ ಮೂಲ ನಿವಾಸಿಗಳ ದೊರೆ ಎಂದೂ ಮೂರು ವರ್ಷಗಳಿಂದ ಹೇಳುತ್ತಾ ಬಂದಿದ್ದೀರಿ. ಆದರೆ ನಿಮ್ಮ ಇಪ್ಪತ್ತು-ಇಪ್ಪತ್ತೈದು ಜನರಲ್ಲೇ ಒಬ್ಬರು “ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕೋಸ್ಕರ ಮಹಾದೇವ ಎನ್ನುವವರನ್ನು ಮಹಿಷ ಮಂಡಲಕ್ಕೆ ಕಳುಹಿಸಿದ ಮತ್ತು ಆ ಮಹಾದೇವ ಭಿಕ್ಕುವೇ ಮಹಿಷಾಸುರ” ಎಂದರೆ, ಇನ್ನೊಬ್ಬರು “ಮಹಿಷಾಸುರನೇ ಬೌದ್ಧ ಭಿಕ್ಕುವಿಗೆ ಆಶ್ರಯ ನೀಡಿ ಬುದ್ಧ ಧರ್ಮ ಪ್ರಚಾರ ಮಾಡಿಸಿದ” ಎನ್ನುತ್ತಾರೆ.ಒಬ್ಬರು ಮಹಿಷಾಸುರನಿಂದ ಮೈಸೂರು ಎನ್ನುವ ಹೆಸರು ಬಂದಿತೆಂದು ಹೇಳಿದರೆ, ಇನ್ನೊಬ್ಬರು ಅವನಿಗಿಂತಲೂ ಮೊದಲೇ ಆ ಪ್ರಾಂತ್ಯಕ್ಕೆ ಮಹಿಷ ಮಂಡಲ ಎಂದಿತ್ತೆಂದು ಹೇಳುತ್ತಾರೆ. ನಿಮ್ಮಲ್ಲೇ ಒಬ್ಬರು “ಮಹಿಷಾಸುರನನ್ನು ಕೊಲ್ಲಲು ಆರ್ಯರು ಚಾಮುಂಡಿ ಎನ್ನುವ ಅವನ ಆಸ್ಥಾನದ ನರ್ತಕಿಯನ್ನು ಬಳಸಿಕೊಂಡರು” ಎಂದರೆ ಇನ್ನು ಕೆಲವರು ಚಾಮುಂಡಿ ಎನ್ನುವವಳು ಹಾಲು ಮಾರುವವಳಾಗಿದ್ದಳು ಎನ್ನುತ್ತಾರೆ. ಮಹಿಷಾಸುರನು ಇಲ್ಲಿನ ಮೂಲ ನಿವಾಸಿಗಳ ಪೂರ್ವಜ ಎಂದು ಹೇಳುವ ನಿಮಗೆ ಉತ್ತರ ಭಾರತದಿಂದ ಬಂದ ಬೌದ್ಧ ಭಿಕ್ಕು ಇಲ್ಲಿನ ಮೂಲನಿವಾಸಿಯಾಗಿದ್ದು ಹೇಗೆ ಎಂದು ಕೇಳುವವರಿಗೆ ಉತ್ತರಿಸಲಾಗುತ್ತಿಲ್ಲ. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಒಮ್ಮಿಂದೊಮ್ಮೆಲೇ “ಇಂದ್ರನಿಂದ ತಪ್ಪಿಸಿಕೊಂಡ ಮಹಿಷಿ, ಮಹಿಷಾಸುರನಿಗೆ ಜನ್ಮ ನೀಡುತ್ತಾಳೆ,ಅದೇ ಮಹಿಷಾಸುರ ದೇವತೆಗಳೊಂದಿಗೆ ಯುದ್ಧ ಮಾಡಿ ಜಯಗಳಿಸುತ್ತಾನೆ” ಎನ್ನುತ್ತೀರಿ! ಆದರೆ ಇಂದ್ರ ದೇವ ಸಾಮ್ರಾಟ ಅಶೋಕನ ನಂತರವೂ ನಮ್ಮ ಮೈಸೂರಿನಲ್ಲಿದ್ದ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ ಎಂದರೆ ಬಹುಶಃ ಇಲ್ಲ. ಒಂದೆಡೆ ಅವನು ರಾಕ್ಷಸನಲ್ಲ,ಅವನಿಗೆ ಕೋರೆ ಹಲ್ಲುಗಳಿರಲಿಲ್ಲ,ಆ ಕೋರೆಗಳನ್ನು ಕಿತ್ತು ಹಾಕುತ್ತೇವೆ ಎನ್ನುತ್ತೀರಿ.ಆದರೆ ಅವನ ಅದೇ ಕೋರೆ ಹಲ್ಲುಗಳಿರುವ ಫೋಟೋ ಮೆರವಣಿಗೆ ಮಾಡುತ್ತೀರಿ ಮತ್ತು ಕಲಾವಿದರ ಮುಖದ ಮೇಲೂ ಕೋರೆ ಹಲ್ಲುಗಳನ್ನು ಬರೆಸಿ ನೃತ್ಯ ಮಾಡಿಸುತ್ತೀರಿ. ಒಬ್ಬರು ಬುದ್ದಿಜೀವಿಯಂತೂ ತಮ್ಮ ಒಂದೇ ಭಾಷಣದಿಂದ ಇದುವರೆಗೂ ನಿಮ್ಮ ಬಳಗದವರೇ ಹೇಳುತ್ತಿದ್ದ ಆರ್ಯ-ದ್ರಾವಿಡ ಕಥೆಗಳನ್ನೆಲ್ಲಾ ಚಿಂದಿ ಮಾಡಿಬಿಟ್ಟರು. ಒಬ್ಬರು “ಚಾಮುಂಡಿ ಎನ್ನುವ ಹೆಂಗಸು ಒಂಭತ್ತನೆಯ ದಿವಸ ಅವನನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾಳೆ,ಅದನ್ನೇ ಪುರೋಹಿತಶಾಹಿಗಳು ನವರಾತ್ರಿ ಎಂದು ಆಚರಿಸಲು ಪ್ರಾರಂಭಿಸಿದರು” ಎನ್ನುವ ಆರೋಪ ಮಾಡಿದರೆ, ಇನ್ನು ಕೆಲವರು ಇತಿಹಾಸ ಕಾಲದಲ್ಲಿದ್ದ “ಮಹಿಷಾಸುರ ತನ್ನ ಶತ್ರುಗಳಾಗಿದ್ದ ದೇವತೆಗಳನ್ನು ಸೋಲಿಸಿದ ನಂತರ ದಶ ದಿಕ್ಕುಗಳಲ್ಲೂ ಸಂತೋಷ ಮೇಳೈಸಿ ದಸರಾ ಹಬ್ಬವಾಯಿತು” ಎನ್ನುತ್ತಾರೆ!

ಇದೆಲ್ಲಾ ಗೊಂದಲಗಳಿಂದಾಗಿಯೇ ನೀವು ಹೇಳುವ ಕಥೆಗಳನ್ನು ಸಾರ್ವಜನಿಕರು ನಂಬುತ್ತಿಲ್ಲ.ಆದ್ದರಿಂದ ನೀವು ಮುಂದಿನ ವರ್ಷದಿಂದ ಮೊದಲು ಮಾಡಬೇಕಾದ ಕೆಲಸವೆಂದರೆ ಒಂದು ವಾರ ಮೊದಲೇ ಒಂದೆಡೆ ಸಭೆ ಸೇರಿ ಯಾವುದಾದರೂ ಒಂದು ಕಥೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ಅದೇ ಕಥೆಯನ್ನೇ ಎಲ್ಲರೂ ಹೇಳಬೇಕು ಎಂದು ಒಗ್ಗಟ್ಟಿನಿಂದ ನಿರ್ಧರಿಸುವುದು.

ಇನ್ನು ಬೌಧ್ಧ ಮತದ ಪ್ರಚಾರಕ್ಕಾಗಿಯೇ ಮಾಡುತ್ತಿದ್ದಾರೇನೋ ಎನ್ನಿಸುತ್ತಿದ್ದ ನಿಮ್ಮ ಮಹಿಷ ದಸರಾ ಕಾರ್ಯಕ್ರಮದಲ್ಲಿ ಒಬ್ಬ ಆಹ್ವಾನಿತರನ್ನು ಬಿಟ್ಟರೆ ಒಬ್ಬರೇ ಒಬ್ಬ ಬೌದ್ಧರೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಹಿಂದೂ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ವೇದಿಕೆಯಲ್ಲೇ ಆಕ್ರೋಶ ಹೊರ ಹಾಕುತ್ತಿದ್ದ ನಿಮ್ಮ ಕಾರ್ಯಕ್ರಮದಲ್ಲಿ ಕೇವಲ ಗಂಡಸರು ಮಾತ್ರ ಕಾಣಿಸುತ್ತಿದ್ದರು.ಆದರೆ ಅಲ್ಲೇ ಪಕ್ಕದ ಚಾಮುಂಡಿ ದೇಗುಲದಲ್ಲಿ ಮಹಿಳೆಯರು,ಮಕ್ಕಳು,ಪುರುಷರು ಗಿಜಿಗಿಜಿಗುಟ್ಟುತ್ತಿರುವುದು ಕಂಡುಬರುತ್ತಿತ್ತು. ಮಹಿಳೆಯರನ್ನು, ಮಕ್ಕಳನ್ನು ಹೊರಗಿಟ್ಟು ಕಾರ್ಯಕ್ರಮ ಮಾಡುತ್ತಾ ಹೋದರೆ ಅದು ಜನಪ್ರಿಯವಾಗುವುದಾದರೂ ಹೇಗೆ? ಆದ್ದರಿಂದ ಮುಂದಿನ ವರ್ಷದಿಂದ ಪುರುಷರಷ್ಟೇ ಮಹಿಳೆಯರು ಮತ್ತು ಮಕ್ಕಳೂ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ. ಹಾಗೆಯೇ ಬೌದ್ಧರು ಹೆಚ್ಚು ಸಂಖ್ಯೆಯಲ್ಲಿ ಸೇರುವಂತೆಯೂ ನೋಡಿಕೊಳ್ಳಿ ಅಥವಾ ನೀವುಗಳೇ ಬೌದ್ಧರಾಗಿ ಮತಾಂತರವಾದರೂ ಆದೀತು.

ಇನ್ನು ನಿಮ್ಮ ಕಾರ್ಯಕ್ರಮ ಪ್ರಾರಂಭವಾಗಿದ್ದೇ ಚಾಮುಂಡೇಶ್ವರಿಯನ್ನು ಮೆರೆಸುವ ನಾಡ ಹಬ್ಬ ದಸರಾಕ್ಕೆ ಪರ್ಯಾಯವೊಂದನ್ನು ಕಟ್ಟುವ ಸಲುವಾಗಿ ಎನ್ನುವುದು ನಿಮ್ಮ ಭಾಷಣಗಳಿಂದಲೇ ನಮಗೆಲ್ಲರಿಗೂ ಅರಿವಾಗಿದೆ. ಹಾಗಾಗಿ ನಾಡ ಹಬ್ಬ ದಸರಾ ಮತ್ತು ಮಹಿಷ ದಸರಾ ನಡುವೆ ಇರುವ ವ್ಯತ್ಯಾಸಗಳನ್ನು ನಿಮಗೆ ತೋರಿಸಿ, ನಿಮ್ಮ ಕಾರ್ಯಕ್ರಮವೂ ಅದೇ ಮಟ್ಟಕ್ಕೆ ಏರಲು ಏನೇನು ಮಾಡಬೇಕು ಎನ್ನುವ ಒಂದಷ್ಟು ಸಲಹೆಗಳನ್ನಿಲ್ಲಿ ನೀಡಲೇಬೇಕು.

ದಸರಾ ಕವಿ ಗೋಷ್ಠಿಯಲ್ಲಿ ಬೇರೆಯವರೊಂದಿಗೆ ಸ್ವಚ್ಛ ಭಾರತ ವಿರೋಧಿಸುವ,ಅರ್ಬನ್ ನಕ್ಸಲ್ ಗಳನ್ನು ಬೆಂಬಲಿಸುವ ಕವಿಗಳಿಗೂ ಕೂಡಾ ಅವಕಾಶ ನೀಡಲಾಗುತ್ತದೆ. ಆದರೆ ನಿಮ್ಮ ಮಹಿಷ ದಸರಾದಲ್ಲಿ ದೇವರನ್ನು ವಿರೋಧಿಸುವ,ಹಿಂದೂಗಳಿಗೆ ಬಯ್ಯುವ ಕವಿಗಳಿಗೆ ಮಾತ್ರ ಅವಕಾಶ ನೀಡುತ್ತೀರಿ.ನೀವೂ ಕೂಡಾ ಎಲ್ಲಾ ಸಿದ್ಧಾಂತಗಳ ಜನರಿಗೂ ಅವಕಾಶ ನೀಡಿದರೆ ಇನ್ನಷ್ಟು ಜನಪ್ರಿಯವಾಗಬಹುದು.

ಚಾಮುಂಡೇಶ್ವರಿ ಉತ್ಸವಗಳು ಲೆಕ್ಕವಿಲ್ಲದಷ್ಟು ಬಡ ಕುಟುಂಬಗಳಿಗೆ ಆದಾಯ ಒದಗಿಸುತ್ತದೆ. ಎಲ್ಲಾ ವರ್ಗದ ಜನರೂ ದಸರಾವನ್ನು ಸಂಭ್ರಮಿಸಲು ಅದೂ ಒಂದು ಕಾರಣ.ಆದರೆ ನಿಮ್ಮ ಕಾರ್ಯಕ್ರಮದಲ್ಲಿ ದಸರಾ ಉತ್ಸವದ ಸಮಯದಲ್ಲಿ ಐಸ್ ಕ್ರೀಮ್,ಕಡಲೆ ಕಾಯಿ ಮಾರುವವರು ಇರುವಷ್ಟೂ ಜನರಿರುವುದಿಲ್ಲ. ಮಹಿಷ ದಸರಾದಿಂದಲೂ ಸಾವಿರಾರು ಕುಟುಂಬಗಳು ಜೀವನ ನಿರ್ವಹಿಸುವಂತಾದರೆ ಜನರೇ ನಿಮ್ಮ ಕಾರ್ಯಕ್ರಮವನ್ನು ಬೆಂಬಲಿಸುತ್ತಾರೆ. ಸದ್ಯಕ್ಕಂತೂ ನೀವು ಕಾರ್ಯಕ್ರಮ ನಡೆಸುವ ಕೇವಲ ಹತ್ತು ಮೀಟರ್ ದೂರದಲ್ಲಿ ಕಬ್ಬಿನ ಹಾಲು ಮಾರುವವನಿಗೂ ನೀವೇನು ಮಾಡುತ್ತಿದ್ದೀರಿ ಎನ್ನುವುದು ತಿಳಿಯುತ್ತಿಲ್ಲ. 

ಚಾಮುಂಡೇಶ್ವರಿಯ ಭಕ್ತರು ವರ್ಷವಿಡೀ ಲಕ್ಷಾಂತರ ಜನರಿಗೆ ಅನ್ನದಾನ ಮಾಡುತ್ತಾರೆ. ಆದರೆ ನೀವು ಮಹಿಷಾಸುರನ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ,ನೀವು ನೀವೇ ಊಟ ಮಾಡಿಕೊಂಡು ಹೋಗುತ್ತೀರೇ ಹೊರತೂ ಒಂದಷ್ಟು ಬಡವರನ್ನು ಕರೆದು ಊಟ ಹಾಕುವುದಿಲ್ಲ. ಮಹಿಷಾಸುರನ ಹೆಸರಿನಲ್ಲಿ ಒಂದೆರಡು ಲಕ್ಷ ಜನರಿಗೆ ಅನ್ನದಾನ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕಾರ್ಯಕ್ರಮವನ್ನು ಬೆಂಬಲಿಸುವವರು ಹತ್ತು ಪಟ್ಟಾದರೂ ಹೆಚ್ಚುತ್ತಾರೆ.

ಇವಿಷ್ಟನ್ನೂ ಮಾಡಿದರೆ ಖಂಡಿತಾ ನಿಮ್ಮ ಕಾರ್ಯಕ್ರಮ ಕೂಡಾ ನಾಡ ಹಬ್ಬ ದಸರಾ ಮಟ್ಟಕ್ಕೆ ಏರಿಯೇ ಏರುತ್ತದೆ. ಇಷ್ಟೆಲ್ಲದರ ನಂತರವೂ ನೀವು ಮೈಸೂರನ್ನು ಆಳಿದ ದೊರೆ ಎಂದು ಹೇಳುತ್ತಿರುವ ಮಹಿಷಾಸುರನು ಆಳಿದ ಕುರುಹುಗಳನ್ನು ಸಾಕ್ಷಿ ಸಮೇತ ಸಾಬೀತುಪಡಿಸದಿದ್ದರೆ ನಿಮ್ಮೆಲ್ಲಾ ಪ್ರಯತ್ನಗಳೂ ವಿಫಲವಾಗುತ್ತವೆ ಎನ್ನುವುದು ಮಾತ್ರ ನೆನಪಿರಲಿ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

(ಪ್ರವೀಣ್ ಕುಮಾರ್ ಮಾವಿನಕಾಡು ಅವರ ‘ಓಪನ್ ಚಾಲೆಂಜ್’ ಕೃತಿಯನ್ನು ಅಯೋಧ್ಯಾ ಪ್ರಕಾಶನ ಪ್ರಕಟಿಸಿದೆ. ದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ಧಿಜೀವಿಗಳನ್ನು ಈ ಕೃತಿಯಲ್ಲಿ ಚೆನ್ನಾಗೇ ತರಾಟೆಗೆ ತೆಗೆದುಕೊಂಡಿರುವ ಮಾವಿನಕಾಡು, ವಿಚಾರಶೂನ್ಯ ವಿಚಾರವಾದಿಗಳನ್ನು ತಮ್ಮ ತಣ್ಣಗಿನ ಬರಹಗಳ ಮೂಲಕವೇ ಬೆತ್ತಲಾಗಿಸಿದ್ದಾರೆ.)