You are currently viewing ‘ನಾನು ನಿಮ್ಮ ಅಭಿಮಾನಿ ಪ್ರವೀಣ್!’… ಹೀಗೆಂದವರು ಯಾರು ಗೊತ್ತಾ!

‘ನಾನು ನಿಮ್ಮ ಅಭಿಮಾನಿ ಪ್ರವೀಣ್!’… ಹೀಗೆಂದವರು ಯಾರು ಗೊತ್ತಾ!

ಹಾಸ್ಯ, ವ್ಯಂಗ್ಯ, ಲೇವಡಿಗಳ ರಚನೆ-ಸಂರಚನೆಗಳು ಬಹಳ ಕ್ಲಿಷ್ಟ ಮತ್ತು ಸಂಕೀರ್ಣ. ಖ್ಯಾತ ತಮಿಳು ಕವಿ ಕಣ್ಣದಾಸನ್ “ಬರೆಯುವುದು ಎಂದರೆ ಅದು ಪ್ರಸವದಂತೆ, ನೋವಿನ ಪರಾಕಾಷ್ಠೆ” ಎಂದಿದ್ದರು. ನಿಜ. ಅರ್ಥಪೂರ್ಣ ರಸೋತ್ಪಾದನೆ ಎಂದರೆ ಅದು ನಿಜಕ್ಕೂ ಸವಾಲೇ ಸರಿ.

ವಿಶಿಷ್ಟ ಬರೆಹಗಾರರಲ್ಲಿ ಶುದ್ಧ ಹಾಸ್ಯದ ಗೊರೂರು ರಾಮಸ್ವಾಮಿ ಅಯ್ಯಂಗಾರ್, ವಿಡಂಬನೆಯ ಬೀಚಿ, ದಾಖಲೆಯ ಸರದಾರ ಎಂ.ಎಸ್.ನರಸಿಂಹ ಮೂರ್ತಿ ಅಗ್ರಗಣ್ಯರು. ಬರೆಯುವವರ ಸಂಖ್ಯೆ ದೊಡ್ಡದಿರಬಹುದು. ದಿನಂಪ್ರತಿ ನೆನಪಾಗುವಂತಹ ಮಹತ್ತ್ವದ ಸಾಲುಗಳನ್ನು ಬರೆದವರು ಕಡಿಮೆಯೇ.

ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವ ಪ್ರವೀಣ್ ಕುಮಾರ್ ಮಾವಿನಕಾಡು, ನನ್ನ ವಿಶೇಷ ಆದರ – ಮೆಚ್ಚುಗೆಗಳಿಗೆ ಕಾರಣರಾಗಿದ್ದಾರೆ. ಪತ್ರಿಕೆಗಳ – ವಾಹಿನಿಗಳ “ಹಂಗಿಲ್ಲದೆ” ಬರೆಯುವ, ಸ್ಪಂದಿಸುವ, ವಿಚಾರಮಂಡನೆ ಮಾಡುವ ಸಾವಿರಾರು ಲೇಖಕರಿಗೆ, ಸಾಮಾಜಿಕ ಜಾಲತಾಣಗಳು ಅಗಾಧವಾದ ವೇದಿಕೆಯನ್ನು ಇಂದು ಒದಗಿಸಿವೆ. ಟೀಕಾಕಾರರು ಏನೇ ಹೇಳಲಿ, ಅಜ್ಞಾತರಿಗೆ – ಅವ್ಯಕ್ತರಿಗೆ ನೂರಾರು ವರ್ಷಗಳಿಂದ ದೊರೆತಿರದ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದು ಲಭ್ಯವಾಗಿದೆ.

ಸುದ್ದಿಮಾಧ್ಯಮದ ಪತ್ರಕರ್ತರಿಗಿರುವಂತೆಯೇ, ಇಲ್ಲಿಯೂ ಸ್ಪಂದನೆಗೆ – ಅಭಿವ್ಯಕ್ತಿಗೆ, ಲೇಖಕರಿಗೆ ಹೆಚ್ಚು ಸಮಯಾವಕಾಶವಿರುವುದಿಲ್ಲ. ಆ ಕ್ಷಣದಲ್ಲಿ ಅತ್ಯುತ್ತಮ ಬರೆವಣಿಗೆ ಸೃಷ್ಟಿಯಾಗಬೇಕು. ಅಂತಹ ಅಪೂರ್ವ ರಸ-ಸೃಷ್ಟಿಯನ್ನು ನಾನು ಪ್ರವೀಣ್ ಅವರ ಅಭಿವ್ಯಕ್ತಿಯಲ್ಲಿ ಗುರುತಿಸಿದ್ದೇನೆ. ಸಮಾರಂಭವೊಂದರಲ್ಲಿ ಅವರು ಪರಿಚಯ ಮಾಡಿಕೊಂಡ ತಕ್ಷಣ “ನಾನು ನಿಮ್ಮ ಅಭಿಮಾನಿ” ಎಂದೆ. ಹಾಗೆ ನೋಡಿದರೆ, ನಾನು ಈವರೆಗೆ ಯಾರ ಅಭಿಮಾನಿಯೂ ಆಗಿಲ್ಲ.

ಪ್ರವೀಣ್ ಅವರ ಅಪರೂಪದ ಒಳನೋಟ, ವಿಶ್ಲೇಷಣೆಗಳು ಮತ್ತು ಜೋಡಣೆ-ಮರುಜೋಡಣೆಗಳು, ಭಾಷಾಶುದ್ಧಿ, ವಿಷಯನಿರೂಪಣೆ ನಿಜಕ್ಕೂ ಅದ್ಭುತ. ಹಾಗೆಂದೇ, ಅವರ ಬಹುಪಾಲು ರಚನೆಗಳನ್ನು ನಾನು ಬಹಳ ಕಡೆ ಹಂಚಿಕೊಂಡಿದ್ದಿದೆ. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಬರೆಹಗಳು ಪುಸ್ತಕರೂಪದಲ್ಲಿ ಬರುತ್ತಿರುವುದು ಅಕ್ಷರಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆಯಲಿ, ಪ್ರಾತಿನಿಧಿಕವಾಗಲಿ. ಮತ್ತೆ ಮತ್ತೆ ಓದುವಂತಹ ಅವರ ರಚನೆಗಳು, ಓದುಗರಿಗೆ ಮತ್ತೆ ಮತ್ತೆ ಓದಲು ದೊರೆಯಲಿ.

ಶುಭಮಸ್ತು.

(ಚಿತ್ರದಲ್ಲಿ ಮಂಜುನಾಥ ಅಜ್ಜಂಪುರ ಅವರು ಡಾ. ಎಸ್ ಎಲ್ ಭೈರಪ್ಪ ಮತ್ತು ನಾಡೋಜ ಎಸ್ ಆರ್ ರಾಮಸ್ವಾಮಿ ಅವರೊಂದಿಗೆ)

(ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕರು : “ವಾಯ್ಸ್ ಆಫ್ ಇಂಡಿಯಾ” ಸಾಹಿತ್ಯ ಸರಣಿ.)