You are currently viewing ಬಡತನವೆಂದರೆ ಅದು ಬವಣೆಯಲ್ಲ. ಅದೊಂದು ಶಾಲೆ.. ಬದುಕು ಒಬ್ಬ ಅತ್ಯುತ್ತಮ ಶಿಕ್ಷಕ. ಇದು ‘ಪಿಂಚ್ ಆಫ್ ಪ್ರಪಂಚ’ ಲೇಖಕರ ಮಾತು…

ಬಡತನವೆಂದರೆ ಅದು ಬವಣೆಯಲ್ಲ. ಅದೊಂದು ಶಾಲೆ.. ಬದುಕು ಒಬ್ಬ ಅತ್ಯುತ್ತಮ ಶಿಕ್ಷಕ. ಇದು ‘ಪಿಂಚ್ ಆಫ್ ಪ್ರಪಂಚ’ ಲೇಖಕರ ಮಾತು…

ಅನ್ನ ತಿಂದರೆ ಅಕ್ಕಿ ಹೆಚ್ಚು ಖರ್ಚಾಗುತ್ತೆ ಅಂತ ಬೆಳಿಗ್ಗೆ ಅನ್ನ ಬಸಿದು ಅದರ ನೀರನ್ನು ಗಂಜಿಯ ರೂಪದಲ್ಲಿ ಕುಡಿಯುತ್ತಾ, ಬೇಸಿಗೆ ರಜೆಯಲ್ಲಿ ಸೇಠು ಅಂಗಡಿಯಲ್ಲಿ ಗ್ರಾಹಕರು ಬಂದು ತೆಗೆಸಿ ಗುಡ್ಡೆ ಹಾಕಿದ ಸೀರೆ ಮತ್ತಿತರ ಬಟ್ಟೆ ಬರೆಗಳನ್ನು ಎತ್ತಿ ಸ್ವಸ್ಥಾನ ಸೇರಿಸುವ ಕೆಲಸ ಮಾಡುತ್ತಾ, ಉಳಿದ ದಿನಗಳಲ್ಲಿ ನ್ಯೂಸ್ ಪೇಪರ್ ನಲ್ಲಿ ಎನ್ವಲಪ್ ತಯಾರಿಸಿ ಮೆಡಿಕಲ್ ಶಾಪುಗಳಿಗೆ ಹತ್ತು ರುಪಾಯಿಗೆ ಸಾವಿರ ಎನ್ವಲಪ್ ಮಾರುವ ಕೆಲಸ ಮಾಡುತ್ತಾ, ಅಮ್ಮ ಹಾಕಿದ ಉಪ್ಪಿನಕಾಯಿ, ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳ ಗ್ರಾಹಕರಿಗೆ ತಲುಪಿಸುವ ಹುಡುಗನಾಗಿ ದಿನ ಕಳೆಯುತ್ತಾ… ಕಳೆದು ಹೋಯಿತು ನನ್ನ ಬಾಲ್ಯ. ಕಾಲೇಜಿಗೆ ಬಂದರೂ ಕಾಲಿಗೆ ಒಳ್ಳೆಯ ಚಪ್ಪಲಿ ಕಂಡಿರಲಿಲ್ಲ. ಬಸ್ ಪಾಸ್ ಆಗುವವರೆಗೆ ಹತ್ತಾರು ಕಿಲೋಮೀಟರ್ ಕಾಲೇಜಿಗೆ ನಡೆದೇ ಹೋಗುತ್ತಿದ್ದೆ. ಜೀವನದ ಪ್ರಥಮ ೨೨ ವರ್ಷ ಪಕ್ಕದ ಮೈಸೂರು, ಬೆಂಗಳೂರಿನ ಎಂಜಿ ರಸ್ತೆ ಕೂಡ ನೋಡಿರದ ಈ ಹುಡುಗನಿಗೆ ನಂತರದ ೨೦ ವರ್ಷದಲ್ಲಿ ೬೦ ದೇಶ ನೋಡುವ ಭಾಗ್ಯ ಸಿಕ್ಕಿತು ಎಂದರೆ ಕೆಲವೊಮ್ಮೆ ನನಗೇ ನಂಬಿಕೆ ಬರುವುದಿಲ್ಲ! ಮೇಲಿನದು ಬಾಲಿವುಡ್ ಚಿತ್ರದ ಕಥೆಯಿರಬಹುದು  ಎನ್ನುವ ಭಾವನೆ ಎಂಥವರಿಗೂ ಬರುವುದು ಸಹಜ. ಆದರೆ ಇದು ಸತ್ಯ. ಬದುಕು ನನ್ನ ಪಾಲಿಗೆ ಎರಡೂ ಮುಖವನ್ನ ಬಹಳ ಕಡಿಮೆ ಸಮಯದಲ್ಲಿ ತೋರಿಸಿದೆ. ಬಡತನವೆಂಬ ಶಾಲೆಯಲ್ಲಿ ಒಬ್ಬ ವಿಧೇಯ ವಿದ್ಯಾರ್ಥಿ ಖಂಡಿತ ಕಲಿಯುತ್ತಾನೆ. ಬಡತನದ ಬದುಕನ್ನು ಬಹಳ ಹತ್ತಿರದಿಂದ ಕಂಡು ಅನುಭವಿಸಿದ ಆಧಾರದ ಮೇಲೆ ನಾನು ಕಂಡ ದೇಶಗಳ ಅನುಭವಗಳು ಅನಾವರಣವಾಗಿವೆ. ಜೊತೆಗೆ ಅಲ್ಲಿಗೆ ಹೋಗಲು ಯಾವ ಸಮಯ ಬೆಸ್ಟ್? ಬಜೆಟ್ ಎಷ್ಟಿರಬೇಕು? ಆ ದೇಶದ ಮೂಲಭೂತ ರೀತಿರಿವಾಜು ಏನು? ವೀಸಾ ಬೇಕೆ? ನಮಗಿಂತ ಅವರು ಹೇಗೆ ಭಿನ್ನ? ಇವೆಲ್ಲವನ್ನು ಈ ಕೃತಿಯಲ್ಲಿ ಹರವಿದ್ದೇನೆ. ಮಾತ್ರವಲ್ಲದೆ ಗೂಗಲ್ ಗುರುಗಳು ಹೇಳದ ಸ್ವಾನುಭವದ ಮಾಹಿತಿಗಳಿಗೆ ಇಲ್ಲಿ ಹೆಚ್ಚಿನ ಮಹತ್ವವವನ್ನು ನೀಡಿದ್ದೇನೆ.

ಇಲ್ಲಿ ಹತ್ತು ದೇಶಗಳ ಅನುಭವವನ್ನು ಒಂದು ಪುಸ್ತಕದಲ್ಲಿ ಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ಒಂದೆರೆಡು ಒನ್ ಇಂಡಿಯಾದಲ್ಲಿ ಪ್ರಕಟವಾಗಿವೆ. ರೀಡೂ ಕನ್ನಡದ ನನ್ನ ಸ್ನೇಹಿತ, ಅದಕ್ಕಿಂತ ಹೆಚ್ಚಾಗಿ ಸಹೋದರ ಶಿವಪ್ರಕಾಶ್ ಭಟ್ ರೀಡೂಗೆ ಬರೆಯಿರಿ ಎಂದರು. ಮೂರ್ನಾಲ್ಕು ಬರಹಗಳು ಅಲ್ಲೂ ಪ್ರಕಟವಾಗಿವೆ. ಸ್ವಿಸ್ ಕುರಿತ ಲೇಖನ ತರಂಗ ವಾರ ಪತ್ರಿಕೆಯಲ್ಲಿ ಮುಖಪುಟ ಲೇಖನವಾಗಿತ್ತು. ಹೀಗೆ ನನ್ನ ಅನುಭವಗಳು ಓದುಗರನ್ನು ತಲುಪಲು ಸಹಾಯ ಮಾಡಿದ ಎಲ್ಲಾ ಸಂಪಾದಕರಿಗೂ ಅನಂತ ಧನ್ಯವಾದಗಳು. 

ಓದುಗ ಪ್ರಭು ಈ ಪುಸ್ತಕವನ್ನು ಸ್ವೀಕರಿಸುತ್ತಾನೆ ಎನ್ನುವ ನಂಬಿಕೆಯಿದೆ. ಇಲ್ಲಿ ಐಫೆಲ್ ಟವರ್ ಉದ್ದವೆಷ್ಟು? ಎಷ್ಟು ಕಬ್ಬಿಣ ಉಪಯೋಗಿಸಿದ್ದಾರೆ? ಎನ್ನುವ ಮಾಹಿತಿಗಳಿಲ್ಲ, ಇಲ್ಲೇನಿದ್ದರೂ ಕುತೂಹಲದಿಂದ ನೋಡುವ ಒಬ್ಬ ಮಧ್ಯಮ ವರ್ಗದ ಭಾರತೀಯ ಹುಡುಗನ ನೋಟ ಸಿಗುತ್ತದೆ ಅಷ್ಟೇ.

ಅನುಭವಿಸಿದ್ದು, ಅನ್ನಿಸಿದ್ದು ಅಕ್ಷರ ರೂಪ ತಾಳಿವೆ. ಅಯೋಧ್ಯಾ ಪ್ರಕಾಶನದ ರೋಹಿತ್ ಚಕ್ರತೀರ್ಥ ಅವರು ಪ್ರಕಟಿಸಲು ಸಮ್ಮತಿಸಿ ಖುಷಿಯನ್ನ ಇಮ್ಮಡಿ ಗೊಳಿಸಿದ್ದಾರೆ. ಪ್ರಕಟಣೆ ದಿನಕ್ಕೆ ಒಂದೂವರೆ ತಿಂಗಳು ಮುಂಚಿನಿಂದ ಅಕ್ಷರ ದೋಷ ತಿದ್ದಲು ರಾಹುಲ್ ಹಜಾರೆಯವರು ಸಹಾಯ ಮಾಡಿದ್ದಾರೆ. ಕೃತಿಗೆ ಅಂದವಾದ ಮುಖಪುಟ ವಿನ್ಯಾಸವನ್ನು ಧೀರಜ್ ಪೊಯ್ಯೆಕಂಡ ಮಾಡಿಕೊಟ್ಟಿದ್ದಾರೆ. ಈ ಎಲ್ಲಾ ಮಿತ್ರರಿಗೂ ಅನಂತ ಧನ್ಯವಾದಗಳು .

ಹೀಗೆ ಒಂದು ಪುಸ್ತಕವಾಗಲು ಅನೇಕ ಜನರ ಕೊಡುಗೆಯಿದೆ. ಅಮ್ಮ, ರಮ್ಯ, ಅನನ್ಯರ ಜೊತೆಗೆ ಕಣ್ಣಿಗೆ ಕಾಣದಿದ್ದರೂ ಕಂಡು ಕಾಣದ ದೇಶದಲ್ಲಿ, ಭಾಷೆಯ ಹಂಗಿಲ್ಲದೆ ಸಹಾಯ ಮಾಡಿರುವ ಎಲ್ಲಾ ಮಹನೀಯರಿಗೆ ವಂದನೆಗಳು.

ಕೊನೆಗೆ, ಬದುಕೆಂದರೆ ಇಷ್ಟೇ, ಜಾಸ್ತಿ ಪ್ಲ್ಯಾನ್ ಮಾಡಬಾರದು. ಭಗವಂತ ನಡೆಸಿದತ್ತ ನಡೆಯುತ್ತಾ ಹೋಗಬೇಕು. ಕಲ್ಮಶವಿರದಿದ್ದರೆ ಎಲ್ಲವೂ ಒಳಿತೇ ಆಗುತ್ತದೆ. ಅದೇ ನಂಬಿಕೆಯಿಂದ ಮುನ್ನೆಡೆಯುತ್ತಿರುವೆ.

ನಿಮ್ಮೆಲ್ಲರ ಪುಸ್ತಕ ಪ್ರೀತಿ – ಅಕ್ಷರ ಪ್ರೀತಿಗೆ ಶರಣು.

ರಂಗಸ್ವಾಮಿ ಮೂಕನಹಳ್ಳಿ

(ಲೇಖಕರು ಮೂಲತಃ ಇನ್ವೆಸ್ಟ್ಮೆಂಟ್ ಬ್ಯಾಂಕರ್. ಇದುವರೆಗೆ ಎಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪಿಂಚ್ ಆಫ್ ಪ್ರಪಂಚ ಅವರ ಒಂಬತ್ತನೆಯ ಕೃತಿ. ಈ ಕೃತಿಯನ್ನು ಓದಲೂ ಬಹುದು, ಜೊತೆಗೆ ‘ನೋಡಲೂ’ ಬಹುದು! ಅಂದರೆ, ಆಯಾ ದೇಶಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ. ಪ್ರವಾಸ ಹೊರಡಲು ಸಿದ್ಧತೆ ಹೇಗಿರಬೇಕು ಎಂಬುದನ್ನೂ ಸ್ವತಃ ಲೇಖಕರೇ ವಿವರಿಸಿರುವ ವಿಡಿಯೋ ಕೂಡ ಪುಸ್ತಕದಲ್ಲಿ ಲಭ್ಯ)