You are currently viewing “ಗಂಧದ ಮಾಲೆ” ಪುಸ್ತಕ ಹೆಸರಿಗೆ ತಕ್ಕಂತೆ ಗಂಧದ ಮಾಲೆಯೆ ಸರಿ!

“ಗಂಧದ ಮಾಲೆ” ಪುಸ್ತಕ ಹೆಸರಿಗೆ ತಕ್ಕಂತೆ ಗಂಧದ ಮಾಲೆಯೆ ಸರಿ!

(ಸಾಮಾಜಿಕ ಕಾರ್ಯಕರ್ತರು. Facebook : facebook.com/bassu.bhadragol )

ರೋಹಿತ ಚಕ್ರತೀರ್ಥರವರು ಬರೆದ “ಗಂಧದ ಮಾಲೆ” ಪುಸ್ತಕ ಹೆಸರಿಗೆ ತಕ್ಕಂತೆ ಗಂಧದ ಮಾಲೆಯೆ ಸರಿ. ಈ ಪುಸ್ತಕದಲ್ಲಿ ಬರುವ ಕಥೆ (ನೈಜಕಥೆ) – “ಮಕ್ಕಳಿಗಾಗಿ ಉಳಿಸಬೇಕಾದದ್ದು ಆಸ್ತಿಯಲ್ಲ ಆದರ್ಶ” ಎನ್ನುವುದು ಸದ್ಯದ ನಮ್ಮೆಲ್ಲರ ಅವಸರದ ಬದುಕಿಗೆ ಹಿಡಿದ ಕನ್ನಡಿಯಂತಿದೆ. ಆನಂತರ 5-6ನೆಯ ವಯಸ್ಸಿನಲ್ಲಿಯೇ ನೂರಕ್ಕೂ ಹೆಚ್ಚು ಕವಿತೆಯ ಸಾಲುಗಳನ್ನು ಬರೆದ ಪೂರ್ಣನ ಬಗೆಗಿನ ಬರಹ ಮನಸ್ಸಿಗೆ ಮುದ ನೀಡುತ್ತದೆ.

ಅತೀ ಹೆಚ್ಚು I Q ಹೊಂದಿದ್ದು, ನ್ಯೂಟನ್ ಐನ್ಸ್ಟೈನ್ ಮುಂತಾದವರಿಗೆ ಸರಿಸಮನಾಗಬಹುದಾಗಿದ್ದ ಒಬ್ಬ ವ್ಯಕ್ತಿ ಅವರಂತಾಗದೆ ಕೊನೆಗೆ ಸಾಮಾನ್ಯ ವ್ಯಕ್ತಿಯಾಗಿ ಬಾಳಿದ ಒಂದು ವಿಚಿತ್ರ ಕಥೆ ಕೂಡ ಈ ಕೃತಿಯಲ್ಲಿದೆ. ಹಾಗೆಯೇ, ದೂರದೃಷ್ಟಿ ಇದ್ದ, ದೇಶ ಕಟ್ಟುವ ಛಾತಿ ಇದ್ದ ಪಾರ್ಕ ಚುಂಗ್ ಹೀ ಯಂತಹ ನಾಯಕರೊಬ್ಬರು ದಟ್ಟ ದರಿದ್ರ ರಾಷ್ಟ್ರವಾಗಿದ್ದ ದಕ್ಷಿಣ ಕೊರಿಯಾದ ಚಿತ್ರಣವನ್ನ ಬದಲಾಯಿಸಿ ವಿಶ್ವದ 5 ನೇ ಶಕ್ತಿಶಾಲಿ ರಾಷ್ಟ್ರವನ್ನಾಗಿ ಹೇಗೆ ಮಾಡಿದ್ದಾರೆನ್ನುವುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಚಕ್ರತೀರ್ಥರು.

ಈ ಪುಸ್ತಕ ಓದುತ್ತಾ ಹೋದಂತೆ ಹಲವು ಸಾಧನೆಯ ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. 1 ಪ್ಲಸ್ ಹೆಸರಿನ ಮೊಬೈಲನ್ನು ಜಗತ್ತಿಗೆ ಪರಿಚಯಿಸಿದ 25-26 ವಯಸ್ಸಿನ ತರುಣರ ಕಥೆ ಮೈ ರೋಮಾಂಚನಗೊಳಿಸುತ್ತದೆ. ಕ್ಯಾನ್ಸರ್ ಗೆದ್ದು ಒಂದು ದೇಶದ ಉದ್ದಗಲಕ್ಕೆ ಮ್ಯಾರಥಾನ್ ಓಡಿದ ವ್ಯಕ್ತಿಯ ಕಥೆಯೂ ಸ್ಫೂರ್ತಿದಾಯಕವಾಗಿದೆ. ಒಂದು ಹೆಣ್ಣಾಗಿ ತಾನು ಅನುಭವಿಸಿದ ಪರಮ ಕಷ್ಟದ ದಿನಗಳನ್ನೆಲ್ಲ ಮೆಟ್ಟಿನಿಂತು ಬಂಗಾರದ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ ಛಪ್ಪನ್ ಚೂರಿ ಜಾನಕಿದೇವಿಯವರ ಬದುಕನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ ಚಕ್ರತೀರ್ಥರು. ಇನ್ನು ಹ್ಯಾರಿ ಪಾಟರ್ ಪುಸ್ತಕ ಬರೆದು ಜಗತ್ತನ್ನೇ ನಿಬ್ಬೆರಗಾಗಿಸಿದ ಲೇಖಕಿಯ ಕತೆ, ಕೊನೆಗೆ ವಿರಾಟ ಕೊಹ್ಲಿ ಹಾಗೂ ಕಲ್ಪನಾ ಚಾವ್ಲಾರ ಬದ್ದತೆಯ ಕಥೆಗಳು… ಇವೆಲ್ಲ ಎಂತಹವರನ್ನೂ ಸ್ಪೂರ್ತಿಗೊಳಿಸಬಲ್ಲವು.

ಇಷ್ಟೆಲ್ಲಾ ಬರೆಯಲು ಕಾರಣ ಏನು ಗೊತ್ತೆ? ಹೆಸರಿಗೆ ತಕ್ಕಂತೆ ಗಂಧದ ಮಾಲೆಯಂತಿರುವ ಈ ಪುಸ್ತಕ ಸ್ಪೂರ್ತಿದಾಯಕವಾದ ಕಥೆಗಳ ಕಣಜ. ಶಾಲಾ ಕಾಲೇಜುಗಳಿಗೆ ರಜೆಯಿರುವ ಸದ್ಯದ ಪರಿಸ್ಧಿತಿಯಲ್ಲಿ ಮಕ್ಕಳು ಮನೇಲಿದ್ದಾರೆ ಎನ್ನುವಾಗ ಈ ಪುಸ್ತಕ ಕೊಟ್ಟು ನೋಡಿ. ನಿಮ್ಮ ಮಕ್ಕಳು ಉತ್ಸಾಹದ ಚಿಲುಮೆಯಾಗೋದು ಖಂಡಿತಾ! ಇಂತಹ ಪುಸ್ತಕವೊಂದನ್ನು ಬರೆದು ನಮ್ಮ ಕೈಗಿಟ್ಟು ಹಲವರಿಗೆ ಹೊಸ ಹುರುಪು ತುಂಬಿದ ರೋಹಿತ ಚಕ್ರತೀರ್ಥರಿಗೆ ತುಂಬು ಹೃದಯದ ಧನ್ಯವಾದಗಳು.

(ಬಸು ಭದ್ರಗೋಳ, ಸಾಮಾಜಿಕ ಕಾರ್ಯಕರ್ತರು. Facebook : facebook.com/bassu.bhadragol )