ರಾಜೇಶ್ವರಿ ಮರ‍್ತಿಯವರು ಜಗತ್ತು ಕಂಡವರು; ಭಾರತ ಅಮೆರಿಕಗಳ ನಡುವೆ ಹಲವಾರು ಬಾರಿ ಹತ್ತಿಳಿದವರು. ಜಗತ್ತಿನ ಎರಡು ದಡಗಳ ಈ ಪರಿಚಯ ಕತೆಗಾರನಿಗಿರುವುದು ಒಳ್ಳೆಯದೇ. ಅಂಥ ಅನುಭವದ ಹಿನ್ನೆಲೆಯಲ್ಲಿ ಅವರು ಕತೆಗಳನ್ನು ಬರೆದಿದ್ದಾರೆ. ರಾಜೇಶ್ವರಿಯವರ ಕತೆಗಳು ಒಂದು ರೀತಿ ಮನೆತೋಟದ ಕಾಲುವೆಯಲ್ಲಿ ಬಿಟ್ಟ ಕಾಗದದ ದೋಣಿಯಂತೆ. ಆ ದೋಣಿಗೆ ನೂರಾರು ಮೈಲಿ ನೀರಲ್ಲೇ ಈಜಾಡಿ ಸಾಗರ ಸೇರುವ ದೊಡ್ಡ ಭ್ರಮೆಯೇನೋ ಇರುವುದಿಲ್ಲ. ಆದರೆ ಅದು ನೀರಲ್ಲಿದ್ದಷ್ಟು ಹೊತ್ತು, ಕಾಲುವೆಯ ದಡಗಳಿಗೆ ಬಡಿಯುತ್ತ, ಹತ್ತಿಳಿಯುತ್ತ, ನೋಡುಗನ ಕಣ್ಣು ತಂಪು ಮಾಡುತ್ತದೆ. ಅವನಿಗೊಂದು ಆಹ್ಲಾದ ತರುತ್ತದೆ. ಅಂಥ ಆಹ್ಲಾದವನ್ನು ಇವರ ಕತೆಗಳು ಓದುಗರಿಗೆ ದಾಟಿಸುತ್ತವೆ. ಇಲ್ಲಿ ಬರುವ ಪಾತ್ರಗಳು ತೀರ ಮಹತ್ವಾಕಾಂಕ್ಷಿಗಳೇನಲ್ಲ; ಹುಟ್ಟಿ ಬಂದದ್ದಕ್ಕೆ ಸಾಯುವ ಮೊದಲು ಜಗತ್ತೇ ಗೆಲ್ಲಬೇಕೆಂಬ ಅಲೆಗ್ಸಾಂಡರತ್ವವನ್ನೇನೂ ಅವು ಪ್ರರ‍್ಶಿಸುವುದಿಲ್ಲ. ಆದರೆ ಬದುಕಿನೊಳಗಿನ ಎಲ್ಲ ಸುಖ-ದುಃಖಗಳಿಗೆ, ನೋವು-ನಲಿವುಗಳಿಗೆ ಅವು ಸಾಕ್ಷಿಯಾಗುತ್ತವೆ. ರಾಜೇಶ್ವರಿಯವರ ಎಲ್ಲ ಕತೆಗಳು ಸುಖಾಂತ್ಯವಾಗುತ್ತವೆ, ಆ ಮೂಲಕ ಓದುಗನಿಗೂ ಒಂದು ತೃಪ್ತಿ, ಹೂನಗೆ, ಸಂತಸ ಉಳಿಸುತ್ತವೆ.