ಇದು ಪ್ರವಾಸಕಥನವಲ್ಲ. ಪ್ರವಾಸ ಮಾಡಿದಾಗ ಕಣ್ಣಿಗೆ ಕಂಡದ್ದನ್ನು ಹೇಗೆ ನೋಡಬಹುದು ಎಂಬ ಒಂದು ನೋಟ ಅಷ್ಟೆ. ಇದೂ ಒಂದು ನೋಟ ಅಷ್ಟೆ; ಇದೇ ಸಮಗ್ರ ಎಂದಾಗಲೀ ಪೂರ್ಣ ಎಂದಾಗಲೀ ಭಾವಿಸುವ ಸಂದರ್ಭ ಖಂಡಿತಾ ಇಲ್ಲ. ಪ್ರತಿಯೊಬ್ಬನದೂ ಒಂದು ನೋಟ ಇದ್ದೇ ಇರುತ್ತದೆ. ಪ್ರತಿಯೊಬ್ಬನ ನೋಟವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೂ ಇರುತ್ತದೆ. ಸಂಘಟನೆಯ ಕಾರ್ಯದಲ್ಲಿ ಮನುಷ್ಯರ ಭೇಟಿಯೇ ಮುಖ್ಯ. ಸ್ಥಾನವನ್ನು ನೋಡಬೇಕೆಂಬ ಹಂಬಲದಿಂದ ಹೊರಟಾಗ ಪ್ರಕೃತಿ ಮತ್ತು ಮನುಷ್ಯನಿರ್ಮಿತಿಗಳು ಮುಖ್ಯವಾಗುತ್ತವೆ. ಮನುಷ್ಯರ ಭೇಟಿ ಎಷ್ಟು ಇಷ್ಟವೋ ಅಷ್ಟೇ ಇಷ್ಟ ಪ್ರಕೃತಿಯ ಮತ್ತು ಮನುಷ್ಯನ ಪ್ರಾಚೀನ ನಿರ್ಮಿತಿಯ ಜತೆಗಿರುವುದು. ಇಲ್ಲಿ ಇವೆರಡೂ ಹಂಬಲಗಳ ಸಂಮಿಲನವಿದೆ. ಇವೆರಡನ್ನೂ ಸಂತುಲನಗೈಯಲು ಪ್ರಯತ್ನಿಸಲಾಗಿದೆ.