1947ರಲ್ಲಿ ನಾವು ಪಡೆದದ್ದು ಬಿಡುಗಡೆ ಮಾತ್ರ, ಸ್ವಾತಂತ್ರ್ಯವಲ್ಲ. ಹಲವು ಸಹಸ್ರ ವರ್ಷಗಳ ಸಂಘರ್ಷದ ಇತಿಹಾಸದಲ್ಲಿ ನಾವು ಶಕ, ಹೂಣರು, ಗ್ರೀಕರು, ಡಚ್ಚರು, ಪೋರ್ಚುಗೀಸರು ಮತ್ತು ಫ್ರೆಂಚರಂಥ ಹಲವು ವಿದೇಶೀ ಶಕ್ತಿಗಳಿಂದ ಬಿಡುಗಡೆ ಪಡೆದಿದ್ದೇವೆ. ಆದರೆ ಸ್ವಾತಂತ್ರ್ಯ ಪಡೆದೆವೇ ಎಂದರೆ ಯೋಚಿಸುವಂತಾಗುತ್ತದೆ. ಭಾರತ ನಿಜವಾದ ಸ್ವಾತಂತ್ರ್ಯ ಪಡೆಯಲು ಇರುವ ಅಡ್ಡಿ-ಆತಂಕಗಳೇನು? ನಿಜಸ್ವಾತಂತ್ರ್ಯ ಪಡೆದರೆ ಭಾರತ ಹೇಗೆ ಜಗತ್ತಿನಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ? - ಎಂಬ ಸಂಗತಿಗಳನ್ನು ಇತಿಹಾಸ-ವರ್ತಮಾನಗಳ ಹಿನ್ನೆಲೆಯಲ್ಲಿ ಚರ್ಚಿಸುವ ಮೌಲಿಕ ಕೃತಿ 'ಬಿಡುಗಡೆಯ ಮಿಂಚು'. ಇತಿಹಾಸದಲ್ಲಿ ನಡೆದುಹೋದ ಘಟನೆಗಳನ್ನು ಪಠ್ಯಪುಸ್ತಕದ ಮಾದರಿಯಲ್ಲಿ ಹೇಳದೆ ಅಲ್ಲಿ ಭಾರತ ಪಡೆದ, ಕಳೆದುಕೊಂಡ ಮುಖ್ಯ ಸಂಗತಿಗಳನ್ನು ಈ ಪುಸ್ತಕವು ದಾಖಲಿಸುತ್ತದೆ. ಗಾಂಧೀಜಿಯವರ ಅಹಿಂಸಾವ್ರತವನ್ನೂ ಅಸಹಕಾರ ಚಳವಳಿಯನ್ನೂ ಇದು ಕಟುವಾಗಿ ವಿಮರ್ಶಿಸುತ್ತದೆ. ಓದುಗರಿಗೆ ಈ ಗ್ರಂಥವು ಇತಿಹಾಸದ ಬಗ್ಗೆ ಹೊಸ ಹೊಳಹುಗಳನ್ನು ಕಾಣಿಸುವುದರಲ್ಲಿ ಸಂಶಯವಿಲ್ಲ.