ಇಂದು ನಮ್ಮ ಜೀವನದ ಪ್ರತಿಯೊಂದು ಮಾಹಿತಿಯೂ ಒಂದಿಲ್ಲೊಂದು ರೀತಿಯಲ್ಲಿ ಅಂತರಜಾಲಕ್ಕೆ ಸಂಪರ್ಕ ಹೊಂದಿದೆ. ನಮ್ಮ ಜೀವನ ಹೀಗೆ ಖಾಸಗಿತನ ಕಳೆದುಕೊಂಡಷ್ಟೂ ಅದಕ್ಕೆ ಲಗ್ಗೆಹಾಕಿ, ಮಹತ್ವದ ಸಂಗತಿಗಳನ್ನು ಎಗರಿಸಿ, ಅವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ವಂಚಕರ ಜಾಲವೂ ವಿಸ್ತರಿಸುತ್ತಿದೆ. ಹೀಗೆ ಬ್ಯಾಂಕ್ ಖಾತೆಯ ವಿವರಗಳನ್ನು ಲಪಟಾಯಿಸುವ, ಈಮೇಲ್ ಮುಚ್ಚಳ ತೆರೆಯುವ, ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡುವ, ಲಕ್ಷಾಂತರ ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ಕೆಲವೇ ನಿಮಿಷಗಳಲ್ಲಿ ಇಲ್ಲವಾಗಿಸುವ, ಒಬ್ಬರ ಚಿತ್ರಕ್ಕೆ ಇನ್ನೊಬ್ಬರ ಚಿತ್ರ ಅಂಟಿಸಿ ಮೋಸ ಮಾಡುವ ನೂರಾರು ಬಗೆಯ ಮೋಸ, ವಂಚನೆಗಳ ಮಹಾ ಕರಾಳ ಲೋಕವನ್ನು ಅನಾವರಣ ಮಾಡುತ್ತಿದೆ "ಸೈಬರ್ ವಂಚನೆ" ಕೃತಿ. ಅಂತರಜಾಲದ ಬಗ್ಗೆ ಗೊತ್ತಿಲ್ಲದವರೇ ಅನಕ್ಷರಸ್ಥರು ಎಂಬಂತಾಗಿರುವ ಈ ಕಾಲದಲ್ಲಿ ಪ್ರತಿಯೊಬ್ಬರೂ ಅವಶ್ಯವಾಗಿ ಓದಲೇಬೇಕಾದ ಕೃತಿ ಇದು.