ನೀವು ಕಾಣ್ಕಾಪು ಕಿತ್ತೆಸೆದು ಓದಿದ್ದೇ ಆದರೆ ನಮ್ಮ ಇತಿಹಾಸ ಪುರುಷರಲ್ಲಿದ್ದ ರಾಮ-ರಾವಣರಿಬ್ಬರ ಅಂಶಗಳೂ ನಿಮಗೆ ಕಾಣಿಸುತ್ತವೆ. ಗೋಡ್ಸೆಯಲ್ಲೊಬ್ಬ ದಿಟವಾದ ದೈವಭಕ್ತನಿದ್ದನೆಂಬುದು ಮನವರಿಕೆಯಾಗುತ್ತದೆ. ಅವನು ನಿಷ್ಠನಿದ್ದ, ಪ್ರಾಮಾಣಿಕನಿದ್ದ, ಶ್ರಮಜೀವಿಯಾಗಿದ್ದ, ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವನಾಗಿದ್ದ ಇತಿಹಾಸ ಓದಿಕೊಂಡವನಾಗಿದ್ದ ಸಜ್ಜನನಾಗಿದ್ದ ಎಂಬುದು ನಿಮಗೇ ಖಾತರಿಯಾಗುತ್ತದೆ. ಅವನು ದೇಶಭಕ್ತಿಯ ವಿಷಯದಲ್ಲಿ ಖಂಡಿತವಾಗ್ಯೂ ಗಾಂಧೀಜಿಗಿಂತ ಕಡಿಮೆಯವನಾಗಿರಲಿಲ್ಲ. ಆದರೆ ನಾಥರಾಮ ಗೋಡ್ಸೆ ಎಂಬ ಭಾವುಕನಿಗೆ ಬದಲಾದ ಕಾಲಮಾನವನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಗುರುಗೋವಿಂದ ಸಿಂಹ, ರಾಣಾಪ್ರತಾಪಸಿಂಹ, ಛತ್ರಪತಿ ಶಿವಾಜಿ ಮಹರಾಜ್ ರ ಕಾಲಕ್ಕೂ ದೇಶ ವಿಭಜನೆಯಾದ 1948ರ ಕಾಲಕ್ಕೂ ಬದುಕು ಬದಲಾಗಿದೆ, ನ್ಯಾಯದ ಪರಿಕಲ್ಪನೆ ಬದಲಾಗಿದೆ, ಜಾತಿ ಧರ್ಮಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮನಿಗಿರಲಿಲ್ಲ.