ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈಗಳು ಸಂಶೋಧಕರು, ಬಹುಭಾಷಾವಿಶಾರದರು ಎಂಬುದು ತಿಳಿದ ವಿಚಾರ. ಅವೆಲ್ಲಕ್ಕೆ ಸರಿಸಮವೆನ್ನುವಂತೆ ಸಾರ್ಥಕ ಕಾವ್ಯಕೃತಿಗಳನ್ನು ರಚಿಸಿದವರು ಅವರು. ಅವರ ಗೊಲ್ಗೊಥಾ, ಗಿಳಿವಿಂಡು, ವೈಶಾಖಿ ಮೊದಲಾದ ಕೃತಿಗಳು ಅವರ ಅಭಿಜಾತ ಕಾವ್ಯಸೃಷ್ಟಿಸಾಮರ್ಥ್ಯಕ್ಕೆ ಉದಾಹರಣೆಯಾಗಿ ನಿಂತಿವೆ. ಗೋವಿಂದ ಪೈಗಳ ಕಾವ್ಯವನ್ನಷ್ಟೇ ಚರ್ಚಿಸುವ ಕೃತಿ ಕನ್ನಡದಲ್ಲಿ ಇದುವರೆಗೆ ಬಂದಿರಲಿಲ್ಲ. ಅಂಥ ಕೊರತೆಯನ್ನು, ಗೋವಿಂದ ಪೈಗಳು ತೀರಿಕೊಂಡು ಅರವತ್ತು ವರ್ಷವಾಗುತ್ತಿರುವ ಸಂದರ್ಭದಲ್ಲಿ ನೀಗಿದ್ದಾರೆ ಕನ್ನಡದ ಮತ್ತೋರ್ವ ವಿದ್ವಾಂಸ, ಬಹುಭಾಷಾವಿದ, ಪುರುಷಸರಸ್ವತಿಯೆಂದೇ ಪ್ರಸಿದ್ಧರಾದ ಶತಾವಧಾನಿ ಡಾ. ಆರ್. ಗಣೇಶರು. ಕನ್ನಡದ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗಷ್ಟೇ ಅಲ್ಲ; ಕನ್ನಡವನ್ನು ಓದಿ ಬರೆದು ಆಸ್ವಾದಿಸುವ ಪ್ರತಿಯೊಬ್ಬ ಸಹೃದಯ ರಸಿಕನೂ ಓದಿ ಮೆಚ್ಚಬಹುದಾದ ಅನನ್ಯ ಕೃತಿ "ಕಡಲಲ್ಲಿ ಮುಗಿಲ ಬೆರಗು."