ಸಾವರ್ಕರ್ ಅವರು ಯಾಕೆ ವೀರ ಮಹಾ ವ್ಯಕ್ತಿತ್ವ, ಅವರ ಜೀವನದ ಒಳತಿರುವುಗಳೇನು ಎಂಬುದರ ಮೇಲೆ ಅಡ್ಡಂಡ ಕಾರ್ಯಪ್ಪ ಬರೆದ ಈ ನಾಟಕ ಬೆಳಕು ಚೆಲ್ಲಿದೆ. ರಂಗಭೂಮಿಯ ಕತ್ತಲೆಯಲ್ಲಿ ನಿಂತಿದ್ದ ಸಾವರ್ಕರ್ ಮೇಲೆ ಈ ನಾಟಕ ಬೆಳಕು ಹಾಯಿಸಿರುವ ರೀತಿ ಅಪರೂಪದ್ದು. ಪ್ರಸಿದ್ಧ ರಾಜಕೀಯ ವ್ಯಕ್ತಿಗಳಾದ ಗಾಂಧಿ, ನೆಹರೂ, ಸುಭಾಷ್, ವಾಜಪೇಯಿ, ಸಾವರ್ಕರ್ ಜೊತೆಗೆ ಚರಿತ್ರೆಕಾರ ಧನಂಜಯ್ ಕೀರ್ ‘ಕರಿನೀರ ವೀರ' ನಾಟಕದಲ್ಲಿ ಪಾತ್ರಗಳಾಗಿರುವುದು, ಜೊತೆಗೆ ಸಂಕೀರ್ಣ ವಿಷಯಗಳನ್ನು ಆರಿಸಿಕೊಂಡು ನಾಟಕ ರಚಿಸುವ ಕೌಶಲ ಇವರಿಗೆ ಸಿದ್ಧಿಸುತ್ತಿರುವುದರ ಸಾಕ್ಷಿ.
ಸಮಕಾಲೀನ ದೇಶಕಾಲಗಳ ಕಟಕಟೆಯಲ್ಲಿ ಇಲ್ಲಿನ ಪಾತ್ರಗಳ ಅಂತರ0ಗ ದರ್ಶನವಾಗುತ್ತದೆ. ಸಾಹಿತ್ಯದ ಕೇಂದ್ರ ಜೀವಾಳ ಮನುಷ್ಯನಾಗಿರುವುದರಿಂದ ಒಬ್ಬ ಮನುಷ್ಯನಾಗಿ ಸಾವರ್ಕರ್ ಅವರ ಜೀವನದ ಪ್ರಮುಖ ಮಜಲುಗಳನ್ನು ನಾಟಕೀಯಗೊಳಿಸುವಲ್ಲಿ ಕಾರ್ಯಪ್ಪ ಸಾಕಷ್ಟು ಸಫಲರಾಗಿದ್ದಾರೆ. ಕನ್ನಡದಲ್ಲಿ ನನಗೆ ತಿಳಿದಂತೆ ಇದು ಸಾವರ್ಕರ್ ಕೇಂದ್ರಿತ ಪ್ರಥಮ ನಾಟಕ. ಸಾವರ್ಕರ್ ಅವರ ರಮ್ಯಾದ್ಭುತ ಜೀವನವನ್ನು ರಂಗಪಠ್ಯವನ್ನಾಗಿ ರೂಪಿಸಿದ್ದಕ್ಕೆ ಕನ್ನಡ ರಂಗಭೂಮಿ ಪ್ರಿಯರ ಪರವಾಗಿ ನಾಟಕಕಾರರನ್ನು ಅಭಿನಂದಿಸುತ್ತೇನೆ.
- ಡಾ. ಜಿ.ಬಿ. ಹರೀಶ್