ಶ್ರೀಯುತ ಪವನ್ ಕಿರಣಕೆರೆಯವರ ಸದಾ ನಗುಮೊಗ, ಅರಳುಗಣ್ಣುಗಳು, ತುಂಬು ಉತ್ಸಾಹ ಮೇಲಾಗಿ ವಿನಯಶೀಲತೆ ಎಲ್ಲವೂ ನನ್ನನ್ನು ಸಾಕಷ್ಟು ಆಕರ್ಷಿಸಿದ್ದವು. ಅವರ ಮನಮುಟ್ಟುವ, ಮನತಟ್ಟುವ, ಸಾಕಷ್ಟು ಗಂಭೀರತೆಯಿಂದ ಕೂಡಿದ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆ ನನ್ನನ್ನು ಸಾಕಷ್ಟು ಸೆಳೆದಿತ್ತು, ಹೆಮ್ಮೆಯುಂಟುಮಾಡಿತ್ತು ಕೂಡ. ಅವರ ಪ್ರವಚನ ಶೈಲಿ ಶ್ರವಣಮೋಹಕ, ಮನೋವೇಧಕ ಹಾಗೂ ಬುದ್ಧಿಚೋದಕ. ಅಂತಹ ಉದಯೋನ್ಮುಖ ಕಲಾವಿದನ ಅವಶ್ಯಕತೆ ಇಂದಿನ ಸಮಾಜದ ಸ್ಥಿತಿಗತಿಗಳಿಗೆ ಉತ್ತೇಜಕ ಹಾಗೂ ಪ್ರೇರಕ ಶಕ್ತಿಯಾಗಿ ಇರುವಂಥದ್ದು. ಮಾನ್ಯ ಡಿ.ವಿ.ಜಿಯವರ ಕಗ್ಗಗಳಿಗೆ ಒಂದೊಂದು ಸುಂದರ ಕಥೆಯನ್ನು ಹೆಣೆದು ಅದರ ಮೌಲಿಕತೆಯನ್ನು ಹೆಚ್ಚಿಸಿದ್ದಾರೆಂದೇ ಹೇಳಬೇಕು. ಶ್ರೀಯುತರು ಹೊನ್ನಿನ ಕಥಾ ಸರಪಳಿಯಲ್ಲಿ ಕಗ್ಗದ ರತ್ನವನ್ನು ಪೋಣಿಸುತ್ತಾ ಸಾಗಿದ್ದಾರೆ. ಇದೊಂದು ಹೊಸ ಪ್ರಯೋಗದಂತೆ ಕಂಡರೂ ಸುಂದರವಾದ ಕಥೆಗಳ ಆಕರ್ಷಣೆಯಿಂದಾಗಿ ಆಬಾಲವೃದ್ಧರೂ ಕಗ್ಗದ ಪದ್ಯಗಳ ಸಾರ್ಥಕ ಅನುಭವವನ್ನು ಸಿದ್ಧಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಎಲ್ಲರೂ ಇದನ್ನು ಓದಬೇಕು, ವಿಶೇಷವಾಗಿ ಮಕ್ಕಳಿಗೆ ಇದು ಹೆಚ್ಚು ಆಕರ್ಷಕ. ಉಪನ್ಯಾಸಕರಿಗೆ, ವಾಗ್ಮಿಗಳಿಗೆ ಹಾಗೂ ಭಾಷಣಕಾರರಿಗೆ ಇದು ಬಹಳ ಪ್ರಯೋಜನವಾದೀತು. ಕಗ್ಗದ ತತ್ವಲೋಕಕ್ಕೂ, ಕಥಾ ಪ್ರಪಂಚಕ್ಕೂ ಏಕಕಾಲದಲ್ಲಿ ಪ್ರವೇಶ ಮಾಡಿಸತಕ್ಕ ಪವನ್ ರವರ ಪ್ರಯತ್ನ ಶ್ಲಾಘನೀಯ. (ವಿದ್ವಾನ್ ಜಿ.ಎಸ್. ನಟೇಶ್ ಬರೆದ ಮುನ್ನುಡಿಯಿಂದ)