ಮಾನವ ಆಶೋತ್ತರಗಳು, ಸುಖದುಃಖ, ಶೋಕತಾಪಗಳು, ಏಳು-ಬೀಳುಗಳು, ಒಳಿತುಕೆಡಕುಗಳ ಆಂತರಿಕ ಹೊಯ್ದಾಟ, ಉನ್ನತ ಆದರ್ಶಕ್ಕಾಗಿ ಹೋರಾಟ, ಅವನ ದೌರ್ಬಲ್ಯಗಳಿಂದುಂಟಾಗುವ ಮಾನಸಿಕ ತುಮುಲ, ಧರ್ಮಾಧರ್ಮಗಳ ನಡುವಿನ ಗೊಂದಲ - ಈ ಮಾನವ ಸಂಬಂಧವಾದ ಜೀವನ ಸತ್ಯಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಮಾರ್ಮಿಕವಾಗಿ ಚಿತ್ರಿಸಲ್ಪಟ್ಟವೆ `ಮಹಾಭಾರತದಲ್ಲಿ'. ಅದರಲ್ಲಿ ಅತ್ಯದ್ಭುತ ರೋಮಾಂಚಕ ಕಥೆಗಳಿವೆ. ಕಾವ್ಯಸೌಂದರ್ಯವಿದೆ. ಶಾಂತಿಸಮಾಧಾನದ ಹಿತ ನುಡಿಗಳಿವೆ. ನಿತ್ಯಜೀವನಕ್ಕೆ ಬೇಕಾಗುವ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಹಲವು ಮಾರ್ಗದರ್ಶಕ ವಿಚಾರಗಳಿವೆ. ಆಧ್ಯಾತ್ಮಿಕ ಸಾಧಕರಿಗೆ ದಿವ್ಯೋಪದೇಶಗಳಿವೆ. ಇಲ್ಲಿ ಉಜ್ವಲ ಕಾಂತಿಯಿಂದ ಪ್ರಕಾಶಿಸುವ ದಿವ್ಯ ಪುರುಷರಿರುವರು, ಶುದ್ಧ ಚಾರಿತ್ರ್ಯದಿಂದ ಕೂಡಿದ ಮಹಾಪುರುಷರಿರುವರು, ಮಾನವೀಯ ಭಾವನೆಯನ್ನು ಕಲಕುವ ಭಾವಮಯ ವ್ಯಕ್ತಿಗಳಿರುವರು, ವೀರೋತ್ಸಾಹವನ್ನು ಕೆರಳಿಸುವ ಪ್ರಚಂಡ ಪರಾಕ್ರಮಿಗಳಿರುವರು, ಅತ್ಯಂತ ಅಸಹ್ಯವನ್ನುಂಟುಮಾಡುವ ಪರಮದುಷ್ಟರಿರುವರು. ಒಟ್ಟಿನಲ್ಲಿ `ಮಹಾಭಾರತ' ಮಾನವಜೀವನದ ಒಂದು ಸಮಗ್ರ ಚಿತ್ರ.