ತನ್ನ ಅಭಿವ್ಯಕ್ತಿಮಾಧ್ಯಮವಾದ ರಂಗಭೂಮಿಯಲ್ಲಿ ತನ್ನ ಅನಿಸಿಕೆಗಳನ್ನು, ಮುಖ್ಯವಾಗಿ - ಸತ್ಯವನ್ನು ಅತ್ಯಂತ ನಿರ್ಭೀತಿಯಿಂದ, ಪ್ರಾಮಾಣಿಕತೆಯಿಂದ ಹೇಳುತ್ತ ಬಂದಿರುವ ರಂಗಕರ್ಮಿ ಅಡ್ಡಂಡ ಕಾರ್ಯಪ್ಪನವರ 'ನಿಜಮಹಾತ್ಮ ಬಾಬಾಸಾಹೇಬ' ನಾಟಕವು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಡಾ. ಅಂಬೇಡ್ಕರ್ ಅವರ ವೈವಾಹಿಕ ಜೀವನ, ಅವರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿದ್ದ ಬಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೊಂದಿಗೆ ಅವರಿಗಿದ್ದ ಸ್ನೇಹ, ಸಂವಿಧಾನದ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಗಾಂಧಿ ನಡುವಿನ ಸಂಬಂಧ - ಇವೆಲ್ಲವನ್ನೂ ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪ್ರಸ್ತುತಿಪಡಿಸಿರುವುದರಿಂದ ಈ ನಾಟಕ ಕೃತಿಯ ಮೌಲ್ಯ ಹೆಚ್ಚಿದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲು ಬಿಗಿ ತಪ್ಪದ ಕಥಾನಿರೂಪಣೆ - ಈ ನಾಟಕದ ಹೈಲೈಟ್.