ನುಡಿಯಲು ಸುಲಭ. ಆದರೆ ಅದು ಯಾರಿಗಿದೆ? 'ಓ ಮನಸೇ' ಪತ್ರಿಕೆಯಲ್ಲಿ 'ಸಮಾಧಾನ' ಅಂಕಣ ಆರಂಭದಿಂದಲೂ ಹಿಟ್, ನೌಕರಿ ಇಲ್ಲದ ಹುಡುಗರ ಆಳಲಿನಿಂದ ಹಿಡಿದು, ಪ್ರಿಯತಮನ ವಂಚನೆಗೆ ಒಳಗಾದ ಹುಡುಗಿಯರ ತನಕ ಎಲ್ಲರಿಗೂ 'ಸಮಾಧಾನ' ಹೇಳಿದವನು ನಾನು, ವಯಸ್ಸಾದ ಹೆಣ್ಣು ಮಕ್ಕಳು ತಮ್ಮದೇ ಮಕ್ಕಳ ವಂಚನೆಗೆ, ಅಸಡ್ಡೆಗೆ, ತಿರಸ್ಕಾರಕ್ಕೆ ಒಳಗಾದಾಗ ಅವರಿಗೆ ಸಿಕ್ಕ ಮಗ ನಾನು. ಇದು ನನ್ನ ಅಹಂಕಾರವಲ್ಲ. ಮತ್ತೊಬ್ಬರಿಗೆ 'ಸಮಾಧಾನ' ಹೇಳುವುದು ನನ್ನ ಪ್ರವೃತ್ತಿ. ಎಂದೋ ಸಿಕ್ಕ ಇಬ್ಬರು ಗೆಳೆಯರು ಆತ್ಮೀಯವಾಗಿ ಒಂದು ಚಿಕ್ಕ ಟೀ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಾರಲ್ಲ? ಹಾಗೆ, ನಾನು ಯಾರೊಂದಿಗೆ ಬೇಕಾದರೂ ಮಾತಾಡಬಲ್ಲೆ. ಸಮಾಧಾನ ಹೇಳಬಲ್ಲೆ. ಕೌನ್ಸೆಲಿಂಗ್ ನನಗೆ ಹುತ್ತಾ ಬಂದ ವಿದ್ಯೆ ಇದು ಅಹಂಕಾರದ ಮಾತಲ್ಲ. ಸಮಸ್ಯೆ ಯಾರಿಗೂ ಬರಬಹುದು. ಈ ಬೆದರಿಕೆಗೆ ನಾನೂ ಒಳಪಟ್ಟಿದ್ದೇನೆ. ಅನೇಕ ಸಲ ಸಮಾಧಾನವನ್ನು ಮತ್ತೊಬ್ಬರಿಂದ ಪಡೆದಿದ್ದೇನೆ. ಅದೇನು ದೊಡ್ಡ ಮಾತಲ್ಲ. ಆ ಕ್ಷಣಕ್ಕೆ ನಮಗೆ ತೋಚದೆ ಇದ್ದುದು ಇನ್ನೊಬ್ಬರಿಗೆ ತೋಚುತ್ತದೆ.
"ನನ್ನ ದೊಡ್ಡ ಅಣ್ಣನಿಂದ ಹಿಡಿದು ಕೊನೇ ಅಣ್ಣನ ತನಕ ಒಬ್ಬರಾದ ಮೇಲೊಬ್ಬರು ಎಳೆದೊಯ್ದು ನನ್ನನ್ನ ರೇಪ್ ಮಾಡುತ್ತಾರೆ. ನಾನು ಏನು ಮಾಡಲಿ?' ಎಂದು ಬರೆಯುವ ನೊಂದ ಅಮಾಯಕ-ನಿಸ್ಸಹಾಯಕ ಮಗುವಿಗೆ ಏನು ಸಮಾಧಾನ ಹೇಳಲಿ? ಆದರೂ ಹೇಳಿದ್ದೇನೆ.