ಒಂದು ಮರದಲ್ಲಿ ನೂರು ಹಣ್ಣು. ಒಂದೊಂದು ಹಣ್ಣಲ್ಲೂ ನೂರು ಮರ - ಎಂಬೊಂದು ಜಪಾನೀ ಹೈಕು ಇದೆ. ಮೇಲ್ನೋಟಕ್ಕೆ ಒಂದೇ ಹಣ್ಣೆಂದು ಕಾಣುವ ವಸ್ತು ಕೂಡ ವಾಸ್ತವದಲ್ಲಿ ನೂರು ಮರಗಳಿಗೆ ಜನ್ಮ ಕೊಡುವ ಶಕ್ತಿಯನ್ನು ಗರ್ಭಿಸಿಕೊಂಡಿರಬಹುದು. ಹಾಗೆಯೇ ಈ ಕೃತಿ. ಇಲ್ಲಿ ಒಂದೊಂದು ಅಧ್ಯಾಯವೂ ಎರಡು-ಮೂರು ಪುಟಗಳಲ್ಲಿ ಮುಗಿಯುತ್ತವೆ. ಮೇಲ್ನೋಟಕ್ಕೆ ಇಲ್ಲಿ ಕಾಣುವ ಘಟನೆಗಳು ನಾವು ದಿನನಿತ್ಯ ನೋಡುವಂಥವು. ಬಹಳಷ್ಟು ಪ್ರಸಂಗಗಳು ನಮ್ಮ ಜೀವನದಲ್ಲೇ ನಡೆದಿರುವ ಸಾಧ್ಯತೆ ಜಾಸ್ತಿ. ಆದರೆ ಆ ಘಟನೆಗಳನ್ನು ಇಟ್ಟುಕೊಂಡು ಲೇಖಕರು ಇಲ್ಲಿ ಜನಸಾಮಾನ್ಯರ ಕಣ್ತಪ್ಪಿಸಿಕೊಂಡ ವಿಚಾರಗಳ ಕಡೆ ಗಮನ ಸೆಳೆಯುತ್ತಾರೆ. ಚಿಕಿತ್ಸೆ ಕೊಡಿಸಲು ಬೆಕ್ಕನ್ನು ಹಿಡಿಯಬೇಕಾದಾಗ ಅದಕ್ಕಿಷ್ಟವಾದ ಮೊಸರನ್ನಿಟ್ಟು, ಬೆಕ್ಕು ಅಲ್ಲಿ ಬರುವಂತೆ ಮಾಡಿ, ಅದನ್ನು ಉಪಾಯವಾಗಿ ಹಿಡಿಯುವ ಪ್ರಸಂಗವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಬೆಕ್ಕು, ಮೊಸರು, ಹಿಡಿಯಬಂದ ಮನೆಯವರು - ಇವೆಲ್ಲವೂ ಮೂಲತಃ ಸಂಕೇತಗಳು; ಈ ಕತೆ ಹೇಳುತ್ತಿರುವ ನೀತಿ ಬೇರೆಯೇ ಎಂದು ಲೇಖಕರು ಹೇಳಿದಾಗ ಓದುಗನಿಗೂ "ಹೌದಲ್ಲವೆ?" ಎನ್ನಿಸುತ್ತದೆ. ಇಲ್ಲಿ ಬರುವ ಬಹಳಷ್ಟು ಪ್ರಸಂಗಗಳೆಲ್ಲವೂ ಲೇಖಕರ ಜೀವನದಲ್ಲಿ ನಡೆದವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು ದಿನನಿತ್ಯ ಹತ್ತಾರು ಮಂದಿಯನ್ನು ಭೇಟಿಯಾಗುವ, ಹತ್ತಾರು ಸ್ಥಳಗಳಲ್ಲಿ ತಿರುಗಾಡುವ ವ್ಯಕ್ತಿಯ ಅನುಭವ ಪ್ರಪಂಚವೂ ದೊಡ್ಡದಾಗಿಯೇ ಇರುವುದು ಸಹಜ. ಅಲ್ಲಿ ತಾನು ಕಂಡ ವ್ಯಕ್ತಿಗಳನ್ನು, ಪ್ರಸಂಗಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿ ಹೊಸ ಹೊಳಹುಗಳನ್ನು ಲೇಖಕರು ಇಲ್ಲಿ ಕೊಟ್ಟಿದ್ದಾರೆ.