ಇಡಿಯ ಭಾರತವರ್ಷ ಪಾಶ್ಚಾತ್ಯರ ಕೈಗೆ ತನ್ನ ಆತ್ಮವನ್ನೊಪ್ಪಿಸಿ ನಲುಗುತ್ತಿದ್ದಾಗ, ಆರ್ಷೇಯ ಜ್ಞಾನಪರಂಪರೆಯ ಜ್ಯೋತಿಯಂತೆ ಬಂದು ಕತ್ತಲನ್ನು ನಿವಾರಿಸಿದ ಮಹನೀಯರು ಬ್ರಹ್ಮಶ್ರೀ ನಾರಾಯಣ ಗುರುಗಳು. ನಾರಾಯಣಗುರುಗಳು ಅದಾಗಲೇ ಬಹುತೇಕ ನಿಂತೇಹೋಗಿದ್ದ ದೇಗುಲನಿರ್ಮಾಣವೆಂಬ ಕಾರ್ಯಕ್ಕೆ ಮತ್ತೆ ಚಾಲನೆ ಕೊಟ್ಟರು. ವಸಾಹತುಶಾಹಿಗಳ ಕ್ರೌರ್ಯಪರಂಪರೆ ಹೇಗಿತ್ತೆಂದರೆ ದೇವಾಲಯಗಳ ನಿರ್ಮಾಣವಿರಲಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಆಗ ಹಿಂದುಗಳ ಜೀವನದ ಪರಮ ಗುರಿಯಾದಂತಿತ್ತು. ಅಂಥ ಸಂದರ್ಭದಲ್ಲಿ ಒಂದೆರಡಲ್ಲ, ನೂರಾರು ದೇವಸ್ಥಾನಗಳನ್ನು ಸ್ವತಃ ನಿರ್ಮಿಸುತ್ತ, ಅಳಿದುಳಿದು ಜೀರ್ಣಾವಸ್ಥೆಯಲ್ಲಿದ್ದುದನ್ನು ಜೀರ್ಣೋದ್ಧಾರ ಮಾಡುತ್ತ, ಜನರಿಗೆ ಧಾರ್ಮಿಕರಾಗುವತ್ತ ಪ್ರಚೋದಿಸುತ್ತ, ಅಧ್ಯಾತ್ಮದ ಅಮೃತಬಿಂದುಗಳನ್ನು ಉಣಬಡಿಸಿದ ನಾರಾಯಣಗುರುಗಳು ಓರ್ವ ಅಸಾಮಾನ್ಯ ಸಂತ. ಕೇರಳದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಮತಾಂತರದ ಕೆಲಸಕ್ಕೆ ದೊಡ್ಡ ತಡೆಗೋಡೆಯಾಗಿ ನಿಂತು, ಹಿಂದುಗಳನ್ನು ಉಳಿಸಿಕೊಂಡ ಪುಣ್ಯಾತ್ಮರು ಇವರು. ಅಲ್ಲದೆ, ಯಾವಯಾವುದೋ ಆಮಿಷಗಳಿಗೆ ತುತ್ತಾಗಿ ಪರಮತಗಳಿಗೆ ಹೋದವರನ್ನು ಮರಳಿ ಹಿಂದು ಧರ್ಮಕ್ಕೆ ಸೇರಿಸಿಕೊಳ್ಳುವ "ಘರ್ ವಾಪಸಿ" ಪರಿಕಲ್ಪನೆಯನ್ನು ಆ ಕಾಲದಲ್ಲೇ ಸಾಕಾರಗೊಳಿಸಿದ್ದ ದ್ರಷ್ಟಾರ. ನಿಸ್ಸಂಶಯವಾಗಿ ಅವರೊಬ್ಬರು ಶಕಪುರುಷರು.