ತುಸು ಅತ್ತ ಸರಿದರೆ ಸಂಪೂರ್ಣವಾಗಿ ಧಾರ್ಮಿಕ-ಅಧ್ಯಾತ್ಮಿಕ ಗ್ರಂಥವಾಗಬಹುದಾದ, ತುಸು ಇತ್ತ ಸರಿದರೆ ಪೂರ್ಣವಾಗಿ ಸಾಮಾಜಿಕ-ಕೌಟುಂಬಿಕ ಕಾದಂಬರಿಯಾಗಬಹುದಾದ ಎರಡು ಅಪಾಯಗಳನ್ನು ಬಗಲಲ್ಲಿಟ್ಟುಕೊಂಡು, ಎರಡನ್ನೂ ಸರಿದೂಗಿಸಿಕೊಂಡು ಮುನ್ನಡೆದಿರುವ ಕೃತಿ "ಯೋಗದಾ". ಶ್ರೀಚಕ್ರ ಉಪಾಸನೆಯ ವಿಧಿವಿಧಾನಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಲೇಖಕಿ, ಆ ಉಪಾಸನೆಯ ಧಾರ್ಮಿಕಶ್ರದ್ಧೆಯ ಸುತ್ತ ಕೌಟುಂಬಿಕ ಏರಿಳಿತಗಳ ಕಥೆ ಹೆಣೆದಿದ್ದಾರೆ. ಶ್ರೀಚಕ್ರದ ಪೂಜೆ-ಉಪಾಸನೆಗಳು ಹರಿಯುವುದು ವಂಶವೃಕ್ಷದ ದಾರಿಯಲ್ಲಲ್ಲ; ಯಾರಿಗೆ ಅದರಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ, ಸಮರ್ಪಣಭಾವಗಳಿರುತ್ತವೋ ಅಂಥವರಿಗೆ ಸೂಕ್ತ ಕಾಲದಲ್ಲಿ ಶ್ರೀಚಕ್ರಯಂತ್ರ ತಾನೇ ತಾನಾಗಿ ಮನೆಸೇರುತ್ತದೆಂಬ ಉದಾತ್ತ ಕಲ್ಪನೆಯೊಂದಿಗೆ ಕಥೆ ಸಾಗುತ್ತದೆ. ಭಾರತೀಯ ಸಂದರ್ಭದಲ್ಲಿ "ಪರಂಪರಾನುಗತ" ಎಂಬುದರ ಅರ್ಥವೇ ಹಾಗೆ. ಇಲ್ಲಿ ವಿದ್ಯೆ, ಪದವಿಗಳು - ರಾಜಪದವಿಯನ್ನೂ ಒಳಗೊಂಡು ಯಾವೊಂದೂ ಅನುವಂಶೀಯವಲ್ಲ. ಶ್ರೀರಾಮನಿಗೆ ಯುವರಾಜಪಟ್ಟವನ್ನು ಕಟ್ಟುವ ಮೊದಲು, ಅವನಿಗೆ ಸರಿಸಮನಾದ ವ್ಯಕ್ತಿಗಳು ರಾಜ್ಯದಲ್ಲಿ ಬೇರಾರಿದ್ದಾರೆಂಬುದನ್ನು ಪರಿಶೀಲಿಸುವ, ಪರೀಕ್ಷಿಸುವ ಕೆಲಸವನ್ನು ದಶರಥ ಮಾಡುತ್ತಾನೆ. ಹೀಗೆ ಯೋಗ, ಯೋಗ್ಯತೆಗಳಿದ್ದಾಗಷ್ಟೇ ಶ್ರೀಚಕ್ರವನ್ನು ಪೂಜಿಸುವ ಅರ್ಹತೆಯೊಂದು ಕೈಗೂಡುತ್ತದೆಂಬ ಸಂದೇಶವಿರುವ "ಯೋಗದಾ" ಶಕ್ತಿ ಆರಾಧನೆಯ ಹಲವು ಮುಖಗಳನ್ನು ತೋರಿಸುವ ಬಗೆ ಅಪೂರ್ವವಾದದ್ದು. - ರೋಹಿತ್ ಚಕ್ರತೀರ್ಥ